ಬೆಳಗಾವಿ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಪ್ರಕರಣ ಹೆಚ್ಚುತ್ತಿದ್ದು, ಶನಿವಾರ ಮತ್ತೆ ಆರು ಜನರಲ್ಲಿ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಸೋಂಕಿತರ ಸಂಖ್ಯೆ 54ಕ್ಕೆ ಏರಿದೆ.
ತಾಲೂಕಿನ ಹಿರೇಬಾಗೇವಾಡಿ ಗ್ರಾಮದ 45 ವರ್ಷದ ಪುರುಷ(ಪಿ-482), 38 ವರ್ಷದ ಪುರುಷ (ಪಿ-483), 20 ವರ್ಷದ ಯುವಕ(ಪಿ-494), 8 ವರ್ಷದ ಬಾಲಕ(ಪಿ-495), 80 ವರ್ಷದ(ಪಿ-484), 55 ವರ್ಷದ(ಪಿ-485), 42 ವರ್ಷದ(ಪಿ-486), 39 ವರ್ಷದ(ಪಿ-487), 35 ವರ್ಷದ(ಪಿ-496). 9 ಸೋಂಕಿತರಲ್ಲಿ ಐವರು ಮಹಿಳೆಯರಿದ್ದು ಈ ಪೈಕಿ ಓರ್ವ ಅಂಗನವಾಡಿ ಕಾರ್ಯಕರ್ತೆಗೂ ಸೋಂಕು ತಗುಲಿದೆ. ಇವರೆಲ್ಲರೂ ಪಿ-128 ಸೋಂಕಿತನ ಜತೆ ದ್ವಿತೀಯ ಸಂಪರ್ಕಕ್ಕೆ ಬಂದಿದ್ದರು ಎಂದು ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ತಿಳಿಸಿದೆ.
ಹಿರೇಬಾಗೇವಾಡಿ ಗ್ರಾಮವೊಂದರಲ್ಲೇ ಇದೀಗ ಒಟ್ಟು 21 ಜನರಿಗೆ ಸೋಂಕು ದೃಢಪಟ್ಟಿವೆ. ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲಿಘಿ ಜಮಾತ್‌ದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಬಂದವರ ಜತೆ ಸಂಪರ್ಕ ಹೊಂದಿದ್ದ ಪಿ-128 ಸೋಂಕಿತನೊಂದಿಗೆ ಈ 9 ಜನ ಸೋಂಕಿತರು ದ್ವಿತೀಯ ಸಂಪರ್ಕ ಹೊಂದಿದ್ದರು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಶನಿವಾರದ ಹೊಸ 9 ಪ್ರಕರಣ ಸೇರಿ ಜಿಲ್ಲೆಯಲ್ಲಿ 54 ಜನರಲ್ಲಿ ಸೋಂಕು ಕಂಡುಬಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಈ ಪೈಕಿ ಗುಣಮುಖರಾಗಿರುವ ನಾಲ್ಕು ಜನರನ್ನು ಬಿಮ್ಸ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.