ಉಳ್ಳಾಲ: ತಡೆಗೋಡೆಯಂತಹ ಸಮಸ್ಯೆಗಳು ಮನುಷ್ಯರೇ ಸೃಷ್ಟಿಸುವ ಸಮಸ್ಯೆ ಹೊರತು ತಾನಾಗಿಯೇ ಉದ್ಭವಿಸುವಂಥದ್ದಲ್ಲ, ಮನೆ, ಇತರ ಕಟ್ಟಡ ನಿರ್ಮಾಣ ಸಂದರ್ಭ ಇತರರ ಬಗ್ಗೆ ಕಾಳಜಿ ಅಗತ್ಯ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಹಳೆಕೋಟೆ ಮುಖ್ಯರಸ್ತೆ ತಡೆಗೋಡೆ ನಿರ್ಮಾಣ ಎರಡನೇ ಹಂತದ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಒಂದೂವರೆ ಕೋಟಿ ಅನುದಾನದಲ್ಲಿ ಕ್ಷೇತ್ರದ ಹಲವು ಕಾಮಗಾರಿಗಳನ್ನು ನಡೆಸಬಹುದು. ಇಷ್ಟು ದೊಡ್ಡ ಮೊತ್ತ ತಡೆಗೋಡೆಗೆ ಹಾಕಿದರೆ ಇತರ ಕಾಮಗಾರಿಗಳಿಗೆ ಅಡ್ಡಿಯಾಗುತ್ತದೆ. ಸ್ಥಳೀಯರು ಒಗ್ಗಟ್ಟು ಕಾಪಾಡಿದರೆ ಊರಿನ ಅಭಿವೃದ್ಧಿ ಸಾಧ್ಯ. ಕೆಲಸ ಆಗುವ ಸಂದರ್ಭ ಅಡ್ಡಿಪಡಿಸದೆ ಪೂರ್ಣ ರೀತಿಯ ಸಹಕಾರ ನೀಡಬೇಕು ಎಂದು ತಿಳಿಸಿದರು.
ಹಳೆಕೋಟೆ ಮಸೀದಿಯ ಖತೀಬ್ ಹಾಫಿಲ್ ಸಿರಾಜುದ್ದೀನ್ ಸಖಾಫಿ ದುವಾಗೈದರು. ಧರ್ಮಗುರುಗಳಾದ ಇರ್ಫಾನ್ ಮದನಿ, ಆದಂ ಮುಸ್ಲಿಯಾರ್, ದರ್ಗಾ ಮಾಜಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹ, ಉಳ್ಳಾಲ ನಗರಸಭಾಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಸಪ್ನಾ ಹರೀಶ್, ಸದಸ್ಯರಾದ ವೀಣಾ ಡಿಸೋಜ, ಖಲೀಲ್, ಅಸ್ಗರ್ ಅಲಿ, ಝರೀನಾ ರವೂಫ್, ಪೌರಾಯುಕ್ತ ಮತ್ತಡಿ, ಮಾಜಿ ಸದಸ್ಯ ಮುಸ್ತಫಾ ಅಬ್ದುಲ್ಲಾ, ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಫಾರೂಕ್ ಯು.ಎಚ್., ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಮಾಸ್ಜಿದುಲ್ ಕರೀಂ ಅಧ್ಯಕ್ಷ ಮಹಮ್ಮದ್, ಮನ್ಸೂರ್ ಮಂಚಿಲ ಮೊದಲಾದವರಿದ್ದರು.
ಕೆಎಂಕೆ ಮಂಜನಾಡಿ ಸ್ವಾಗತಿಸಿದರು. ನಗರಸಭೆ ಮಾಜಿ ಉಪಾಧ್ಯಕ್ಷ ಯು.ಪಿ. ಅಯೂಬ್ ಮಂಚಿಲ ವಂದಿಸಿದರು.