ಜಿಲ್ಲೆ

ಹಲಸು ಖರೀದಿಗೆ ಮುಗಿಬಿದ್ದ ಜನರು,  ಅಂದಾಜು 10 ಲಕ್ಷ ರೂ. ವಹಿವಾಟು,  ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಜೆ.ಸಿ.ನಗರ ಭಗಿನಿ ಮಂಡಳದಲ್ಲಿ ಸಹಜ ಸಮೃದ್ಧ ಮತ್ತು ರೋಟರಿ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ಸಾವಯವ ಮಾವು ಮತ್ತು ಹಲಸಿನ ಮೇಳಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು.

ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೂ ಅನೇಕ ಜನರು ಮೇಳಕ್ಕೆ ಭೇಟಿ ನೀಡಿ ತರಹೇವಾರಿ ಹಲಸು ಖರೀದಿಗೆ ಮುಗಿಬಿದ್ದರು. ಇದಲ್ಲದೇ ಸಾವಯವ ಧಾನ್ಯ, ದೇಶಿ ತಳಿ ಬೀಜಗಳು, ಕರಕುಶಲ ವಸ್ತುಗಳು, ಹಲಸಿನ ವಿವಿಧ ಪದಾರ್ಥಗಳ ಮಾರಾಟವೂ ಭರ್ಜರಿಯಾಗಿ ನಡೆಯಿತು.

ಎರಡು ದಿನದ ಮೇಳದಲ್ಲಿ ಅಂದಾಜು 10 ಲಕ್ಷ ರೂ. ವಹಿವಾಟು ನಡೆದಿದೆ ಎಂದು ಸಹಜ ಸಮೃದ್ಧ ಸಂಸ್ಥೆಯ ಶಾಂತಕುಮಾರ ತಿಳಿಸಿದ್ದಾರೆ.

ಸಾವಯವ ಮಾವು ಮತ್ತು ಹಲಸು ಮೇಳದ ಎರಡನೇ ದಿನ ಮಕ್ಕಳಿಗೆ "ನಾ ಕಂಡಂತೆ ಹಲಸು' ಚಿತ್ರ ಕಲಾ ಸ್ಫರ್ಧೆ ಏರ್ಪಡಿಸಲಾಗಿತ್ತು. ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯಿತು. 50ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ಚಿತ್ರ ಬಿಡಿಸಿದರು.

5ನೇ ತರಗತಿ ಒಳಗಿನ ಮಕ್ಕಳಲ್ಲಿ ಮೊದಲ ಬಹುಮಾನ ದ್ವಾನಿ ಕರ್ವಾ, ದ್ವಿತೀಯ ಪ್ರಿಯಾಲ ಕಬಾಡೆ, ತೃತೀಯ ಬಸವ ತ್ರಿವೇದ ಅವರು ಪಡೆದರು.
6ನೇ ತರಗತಿ ಮೇಲ್ಪಟ್ಟ ಮಕ್ಕಳಲ್ಲಿ ಪ್ರಥಮ ಸಾನ್ವಿ ಯಾರಗುಪ್ಪ, ದ್ವಿತೀಯ ಆದಿತ್ಯ ಕಬಾಡೆ ಹಾಗೂ ತೃತೀಯ ಉನ್ನತಿ ತ್ರಾಸಿ ಅವರು ಪಡೆದರು.

ಸಮಜ ಸಮೃದ್ಧ ಕಾರ್ಯದರ್ಶಿ ಆನಂದತೀರ್ಥ ಪ್ಯಾಟಿ, ರೋಟರಿ ಕ್ಲಬ್ ನಿರ್ದೇಶಕ ವಸಂತ ಭಸ್ಮೆ, ಕ್ಲಬ್ ಮಾಜಿ ಅಧ್ಯಕ್ಷ ಅಚ್ಯುತ್ ಲಿಮಯೇ, ತೀರ್ಪುಗಾರರಾದ ಕೇಶವ ವಿದ್ಯಾಕೇಂದ್ರದ ಸುಧಾ ಹುಲಕುಂದ, ಶೈಲಜಾ ಗಣಾಚಾರಿ ಇತರರು ಇದ್ದರು.