ಮೂಡಿಗೆರೆ: ಕರ್ನಾಟಕ ಬೆಳೆಗಾರರ ಒಕ್ಕೂಟ ನೂತನ ಅಧ್ಯಕ್ಷರಾಗಿ ಹಳಸೆ ಶಿವಣ್ಣ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಹಳಸೆ ಶಿವಣ್ಣ ಮೂಡಿಗೆರೆ ತಾಲೂಕಿನ ಹಳಸೆ ಗ್ರಾಮದ ಕಾಫಿ ಬೆಳೆಗಾರರಾಗಿದ್ದು, ಮೂಡಿಗೆರೆ ಪಿಕಾರ್ಡ ಬ್ಯಾಂಕ್‌ನ ಅಧ್ಯಕ್ಷರಾಗಿ, ಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾಗಿ, ಕರ್ನಾಟಕ ಬೆಳೆಗಾರರ ಒಕ್ಕೂಟದ ಸಂಸ್ಥಾಪಕ ಸದಸ್ಯರಾಗಿ, ಒಕ್ಕೂಟದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೆಜಿಎಫ್ ನೂತನ ಅಧ್ಯಕ್ಷ ಹಳಸೆ ಶಿವಣ್ಣ ಮಾತನಾಡಿ, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಅವಿರೋಧವಾಗಿ ಆಯ್ಕೆಮಾಡಿರುವುದು ನನ್ನ ಜವಾಬ್ದಾರಿ ಹೆಚ್ಚಿಸಿದೆ. ನನ್ನ ಅವಧಿಯಲ್ಲಿ ಕಾಫಿ ಬೆಳೆಗಾರರ ಹಿತಾಸಕ್ತಿಗೆ ಪೂರಕವಾಗಿ, ಕಾಫಿ ಉದ್ದಿಮೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು. ಕಾಫಿ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲಾಗುವುದು ಎಂದರು.
ಕಾಡಾನೆ, ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಗಾರರು ಹೈರಾಣಾಗಿದ್ದಾರೆ. ಕಾಫಿ ತೋಟಕ್ಕೆ ಹೋಗಲು ಭಯಪಡುತ್ತಿರುವ ಕಾರಣ ತೋಟ ಪಾಳು ಬಿಡುವ ಹಂತಕ್ಕೆ ತಲುಪಿದೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸಕಲೇಶಪುರದಲ್ಲಿ ನಡೆದ ಬೆಳೆಗಾರರ ಸಮಾವೇಶದಲ್ಲಿ ಕೇಂದ್ರ ಸಚಿವರು, ಸಂಸದರು, ರಾಜ್ಯದ ಸಚಿವರು ಮತ್ತು ಶಾಸಕರಿಗೆ ಮನವಿ ಮಾಡಲಾಗಿದೆ. ಒತ್ತುವರಿ ಸಮಸ್ಯೆಗೆ ಸರ್ಕಾರ ಸ್ಪಂದಿಸಿ ಗುತ್ತಿಗೆ ಆಧಾರದಲ್ಲಿ ಒತ್ತುವರಿ ಜಮೀನು ಬೆಳೆದಾರರಿಗೆ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಮಳೆಯಿಂದ ಬೆಳೆ ನಷ್ಟಕ್ಕೆ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ. ಬೆಳೆಗಾರರ ಇನ್ನೂ ಹಲವಾರು ಸಮಸ್ಯೆಗಳಿಗೆ ಮುಕ್ತಿ ದೊರಕಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.