ಸಾಗರ: ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವ ಮೂಲಕ ಗ್ರಾಮಾಡಳಿತ ವಹಿಸಿಕೊಳ್ಳುವುದು ನಿಶ್ಚಿತ ಎಂದು ಶಾಸಕ ಹರತಾಳು ಹಾಲಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಪಂ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿರುವ 15 ಸದಸ್ಯರು, ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಕೌಟಿಲ್ಯ, ಬಿಜೆಪಿ ಹಿರಿಯ ಪ್ರಕೋಷ್ಠದ ರಾಜ್ಯ ಸದಸ್ಯ ಯು.ಎಚ್.ರಾಮಪ್ಪ ಅವರಿಗೆ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿಯಿಂದ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಧಾನಿಗೆ, ಮುಖ್ಯಮಂತ್ರಿಗೆ ಚೆಕ್ಗೆ ಸಹಿ ಮಾಡಲು ಅವಕಾಶ ಇರುವುದಿಲ್ಲ. ಆದರೆ ಗ್ರಾಪಂ ಅಧ್ಯಕ್ಷರಿಗೆ ಅಂತಹ ಅವಕಾಶವನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಕಲ್ಪಿಸಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅವಿರೋಧವಾಗಿ ಆಯ್ಕೆಯಾಗಿರುವ ಸದಸ್ಯರು ಸ್ಪರ್ಧೆಯಲ್ಲಿರುವ ಬಿಜೆಪಿ ಬೆಂಬಲಿತ ಸದಸ್ಯರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಕೌಟಿಲ್ಯ, ಸಾಗರ ನನ್ನ ಮೆಚ್ಚಿನ ಊರುಗಳಲ್ಲೊಂದು. ನಾನು ನಿಗಮದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೈಸೂರು ಹೊರತುಪಡಿಸಿದರೆ ಮೊದಲ ಬಾರಿಗೆ ಸಾಗರದ ಬಿಜೆಪಿ ಕಚೇರಿಗೆ ಭೇಟಿ ಕೊಟ್ಟಿದ್ದೇನೆ. ಸಿಎಂ ನನ್ನ ಮೇಲೆ ವಿಶ್ವಾಸವಿರಿಸಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಅವರ ನಂಬಿಕೆಗೆ ಕುಂದು ಬಾರದಂತೆ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.
ಎಂಎಸ್ಐಎಲ್ ಅಧ್ಯಕ್ಷ, ಶಾಸಕ ಹರತಾಳು ಹಾಲಪ್ಪ ಅವರನ್ನು ಹಿಂದುಳಿದ ಮೋರ್ಚಾದಿಂದ ಅಭಿನಂದಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಾಲತೇಶ್, ಲೋಕನಾಥ್ ಬಿಳಿಸಿರಿ, ಕೆ.ಆರ್.ಗಣೇಶಪ್ರಸಾದ್, ಮಧುರಾ ಶಿವಾನಂದ್, ವಿ.ಮಹೇಶ್, ಚೇತನರಾಜ್ ಕಣ್ಣೂರು, ಕುಪೇಂದ್ರ, ದೇವೇಂದ್ರಪ್ಪ, ಬಿ.ಟಿ.ರವೀಂದ್ರ, ರಾಜು ಬಿ.ಮಡಿವಾಳ, ಕೆ.ಜಿ.ಸಂತೋಷ್, ಪ್ರದೀಪ್ ಇದ್ದರು.