ಜಿಲ್ಲೆ

ಬಸ್‌ ಸ್ಟ್ಯಾಂಡ್‌ ಕಸ ಹೆಕ್ಕಿ ಪ್ರಸಿದ್ಧವಾದ ಅಂಕೋಲಾದ ಹಾಲಕ್ಕಿ ಮಹಿಳೆ

ಕಾರವಾರ: ಬಸ್‌ ಸ್ಟ್ಯಾಂಡ್‌ ನಲ್ಲಿ ಕಸ ಹೆಕ್ಕಿದ ಹಾಲಕ್ಕಿ ಮಹಿಳೆಯ ಮಾದರಿ ಕಾರ್ಯ ಈಗ ರಾಷ್ಟ್ರದ ಗಮನ ಸೆಳೆದಿದೆ.

ಅಂಕೋಲಾ ಬಸ್ ನಿಲ್ದಾಣದಲ್ಲಿ ಹಣ್ಣು ಮಾರುವ ಹಾಲಕ್ಕಿ ಮಹಿಳೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಸುಪ್ರಸಿದ್ಧ ಉದ್ಯಮಿ ಆನಂದ ಮಹಿಂದ್ರಾ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಸ್ವಚ್ಛ ಭಾರತ ಮಿಷನ್ ಯೋಜನೆಗೆ ಇವರು ಮಾದರಿಯಾಗಿದ್ದಾರೆ ಎಂದಿದ್ದಾರೆ

ಅಲ್ಲದೆ, ಇವರನ್ನು ನಾನು ಒಮ್ಮೆ ಭೇಟಿಯಾಗಬೇಕು ಎಂದು ಆದರ್ಶ ಹೆಗಡೆ ಎನ್ನುವವರು ಮಾಡಿದ ಟ್ವೀಟನ್ನು ಉಲ್ಲೇಖಿಸಿ ಬರೆದು ಅವರು ಮರು ಟ್ವೀಟ್ ಮಾಡಿದ್ದಾರೆ.

ವಿಡಿಯೋದಲ್ಲೇನಿದೆ?

ಬೇಸಿಗೆ ಬಂತು ಎಂದರೆ ಕಾಡಿನಲ್ಲಿ ಸಿಗುವ ನೇರಳೆ ಹಣ್ಣು, ಬಿಳಿ ಮುಳ್ಳೆ ಹಣ್ಣುಗಳನ್ನು ಹಾಲಕ್ಕಿ ಮಹಿಳೆಯರು ತಂದು ಅಂಕೋಲಾ ಬಸ್ ನಿಲ್ದಾಣದಲ್ಲಿ ಮಾರುತ್ತಾರೆ.

ಅವರು ಅವುಗಳನ್ನು ಪ್ಲಾಸ್ಟಿಕ್‌ ಕೊಟ್ಟೆಯಲ್ಲೋ, ಕಾಗದದಲ್ಲೋ ಮಾರುವ ಬದಲು ಕಾಡಿನಲ್ಲಿ ಸಿಗುವ ಎಲೆಯಲ್ಲೇ ಹಾಕಿ ಮಾರುತ್ತಾರೆ.

ಆದರೆ, ಜನ ಹಣ್ಣುಗಳನ್ನು ತಿಂದು ಎಲೆಯನ್ನು ಬಸ್‌ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಬಿಸಾಕುತ್ತಾರೆ.

ಹಣ್ಣು ಮಾರುವ ಮಹಿಳೆಯರು ಜನ ಬಿಸಾಕಿದ ಎಲೆಗಳನ್ನು ಹೆಕ್ಕಿ ತಂದು ಕಸದ ಬುಟ್ಟಿಗೆ ಹಾಕಿ ತನ್ನ ಜವಾಬ್ದಾರಿ ನಿಭಾಯಿಸುತ್ತಾರೆ.

ಅನಕ್ಷರಸ್ಥ ಮಹಿಳೆಯ ಕಾರ್ಯವನ್ನು ಯಾರೋ ಪ್ರಯಾಣಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.

ಕಳೆದ ಎರಡು ದಿನಗಳಿಂದ ಸ್ಥಳೀಯವಾಗಿ ಓಡಾಡುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಮಹಿಂದ್ರಾ ವಾಹನ ಕಂಪನಿಯ ಮಾಲೀಕ ಆನಂದ ಮಹಿಂದ್ರಾ ಅದನ್ನು ಸೋಮವಾರ ಟ್ವೀಟ್ ಮಾಡಿದ್ದಾರೆ.

ಟ್ವೀಟ್‌ 7 ತಾಸಿನಲ್ಲಿ 783 ಸಾವಿರ ಜನ ವೀಕ್ಷಿಸಿದ್ದು, 2159 ಜನ ಅದನ್ನು ರೀ ಟ್ವೀಟ್ ಮಾಡಿದ್ದಾರೆ. 16 ಸಾವಿರ ಜನ ಇಷ್ಟಪಟ್ಟಿದ್ದಾರೆ. ಈಗ ಅದು ರಾಷ್ಟçದ ಗಮನ ಸೆಳೆದಿದೆ.

ವಿಡಿಯೋ ಲಿಂಕ್‌ ಇಲ್ಲಿದೆ.https://twitter.com/anandmahindra/status/1645662297963257856?t=EWqd_-9gYZe6LJrhkOHwhg&s=08