ಜಿಲ್ಲೆ

ಹಲಗೂರು ಗ್ರಾಮ ಪಂಚಾಯಿತಿಯಲ್ಲಿ ಸದಸ್ಯ, ಪಿಡಿಒ ಜಟಾಪಟಿ: ಮಂಡ್ಯ ನಗರದಲ್ಲಿ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಲೋಕಾಯುಕ್ತರಿಗೆ ದೂರು ನೀಡಿದ್ದಾರೆಂಬ ಕಾರಣಕ್ಕೆ ಮಳವಳ್ಳಿ ತಾಲೂಕು ಹಲಗೂರು ಗ್ರಾಮ ಪಂಚಾಯಿತಿ ಪಿಡಿಒ, ಗ್ರಾಪಂ ಸದಸ್ಯ ಕೆ.ಸುರೇಂದ್ರ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾರೆಂದು ಆರೋಪಿಸಿ ಹಲಗೂರು ಗ್ರಾಮದ ಮುಖಂಡರು, ಪ್ರಗತಿಪರ ಸಂಘಟನೆ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ತೆರಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನವಿ ಸಲ್ಲಿಸಿದರು. ಸದಸ್ಯ ಸುರೇಂದ್ರ ಅವರು ಸಾರ್ವಜನಿಕವಾಗಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಾ ಜನಾನುರಾಗಿಯಾಗಿದ್ದಾರೆ. ಈ ಹಿಂದೆ ಕೂಡ ಎಚ್.ಬಸಾಪುರ ಗ್ರಾಪಂ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಪಿಡಿಒ ರುದ್ರಯ್ಯ ಅಧಿಕಾರ ಸ್ವೀಕರಿಸಿದ ನಂತರ ಗ್ರಾಪಂನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದ್ದು, ಸರ್ಕಾರಿ ಜಾಗಗಳನ್ನು ಅಕ್ರಮವಾಗಿ ಖಾತೆ ಮಾಡಿದ್ದಾರೆ. ಮಾತ್ರವಲ್ಲದೆ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಂಡಿದ್ದು, ಈ ಬಗ್ಗೆ ಸುರೇಂದ್ರ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಕಂದಾಯ ಇಲಾಖೆಗೆ ದೂರು ನೀಡಿದ್ದಾರೆಂದು ವಿವರಿಸಿದರು.

ಈ ಹಿನ್ನೆಲೆಯಲ್ಲಿ ಜಿಪಂ ಸಿಇಒ, ತನಿಖಾ ತಂಡ ರಚಿಸಿ ಸಿ.ರುದ್ರಯ್ಯ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು. ಅಲ್ಲದೆ ಕೆ. ಸುರೇಂದ್ರ ಅವರು ಪಿಡಿಒ ರುದ್ರಯ್ಯ ವಿರುದ್ಧ ಲೋಕಾಯುಕ್ತಕ್ಕೂ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದರು. ಆದ್ದರಿಂದ ಅಮಾನತುಗೊಳ್ಳುವ ಭಯದಿಂದ ಹಾಗೂ ರಾಜ್ಯಸರ್ಕಾರ ಕಾನೂನು ಕ್ರಮ ಜರುಗಿಸುವ ಹಿನ್ನೆಲೆಯಲ್ಲಿ ಸುರೇಂದ್ರ ಅವರ ವಿರುದ್ಧ ಹಲಗೂರು ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಆದ್ದರಿಂದ ಪಿಡಿಒ ಅಮಾನತುಗೊಳಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಂಜುನಾಥ, ಸಂತೋಷ, ರಮೇಶ, ಕೆಂಪೇಗೌಡ, ವೆಂಕಟೇಗೌಡ, ಭಗವಾನ್, ಶಿವು, ಶ್ರೀನಿವಾಸ, ದಿಲೀಪ್, ಎನ್.ಶಿವನಂಜು, ರವಿ, ಸುಮಂತ್, ಕನಕಮೂರ್ತಿ, ಪ್ರವೀಣ್, ಕುಮಾರ ರಾಜು, ಬಸವರಾಜು ಇತರರಿದ್ದರು.