ಜಿಲ್ಲೆ

ಹಲಗೇರಿ ಕಾರು ಅಪಘಾತ ಪ್ರಕರಣ, ಮತ್ತೊಬ್ಬ ಮಹಿಳೆ ಸಾವು, ಮೃತರ ಸಂಖ್ಯೆ 5ಕ್ಕೆ ಏರಿಕೆ

ರಾಣೆಬೆನ್ನೂರ: ನಗರದ ಹೊರವಲಯದ ಎನ್​ಎಚ್ 48ರ ಹಲಗೇರಿ ಸೇತುವೆ ಬಳಿ ಕಾರು ಪಲ್ಟಿಯಾಗಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟು 6 ಜನ ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ಮಹಿಳೆ ಭಾನುವಾರ ಮೃತಪಟ್ಟಿದ್ದಾರೆ.

ಹಾವೇರಿ ಅಶ್ವಿನಿ ನಗರದ ನಿವಾಸಿ ಸಾವಿತ್ರಾ ಸುರೇಶ ಜಾಡಿ (44) ಮೃತ ಮಹಿಳೆ.

ಇವರು ಅಪಘಾತದಲ್ಲಿ ಮೃತಪಟ್ಟ ಸುರೇಶ ವೀರಪ್ಪ ಜಾಡಿ ಅವರ ಪತ್ನಿಯಾಗಿದ್ದು, ಮೇ 24ರಂದು ನಡೆದ ಅಪಘಾತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಅವರನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಇದರಿಂದ ಅಪಘಾತದಲ್ಲಿ ಐವರು ಮೃತಪಟ್ಟಂತಾಗಿದೆ.

ಇನ್ನುಳಿದ ಐವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಉಳಿದವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ನಗರದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.