ಹುಬ್ಬಳ್ಳಿ : ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ವತಿಯಿಂದ ನಗರದ ರಾಣಿ ಚನ್ನಮ್ಮ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾನೆಗಾಗಿ ಮಂಗಳವಾರ ಬೆಳಗ್ಗೆ ಹಾಲಗಂಬ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಕಳೆದ ಮೂರು ವರ್ಷಗಳಿಂದ ರಾಣಿ ಚನ್ನಮ್ಮ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಈ ವರ್ಷವೂ ವಿಜೃಂಭಣೆಯಿಂದ ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ ಎಂದರು.
ಮಹಾಮಂಡಳಿಯ ಅಧ್ಯಕ್ಷ ಸಂಜೀವ ಬಡಸ್ಕರ ಮಾತನಾಡಿ, ಮಹಾನಗರ ಪಾಲಿಕೆಯವರು ಈ ಬಾರಿ ಗಣೇಶ ಚತುರ್ಥಿಗೆ 4 ದಿನ ಮುಂಚೆಯೇ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಿದ್ದಾರೆ. ಹೀಗಾಗಿ, ಯಾವುದೇ ಗೊಂದಲ ಮೂಡಲಿಲ್ಲ ಎಂದು ಹೇಳಿದರು.
ಆ. 27ಕ್ಕೆ ಬೆಳಗ್ಗೆ 9 ಗಂಟೆಗೆ ಮೂರುಸಾವಿರ ಮಠದ ಆವರಣದಿಂದ ಗಣೇಶ ಮೂರ್ತಿಯ ಮೆರವಣಿಗೆ ಪ್ರಾರಂಭಗೊಳ್ಳಲಿದೆ. 11 ಗಂಟೆಗೆ ಮೆರವಣಿಗೆ ರಾಣಿ ಚನ್ನಮ್ಮ ಮೈದಾನ ತಲುಪಲಿದೆ. ಈ ಬಾರಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮೆರವಣಿಗೆಗೆ ಡಿಜೆ ಬಳಸದಿರಲು ನಿರ್ಧರಿಸಲಾಗಿದೆ. ದೇಸಿ ವಾದ್ಯ ಬಳಕೆ ಮಾಡುತ್ತಿದ್ದು, 300ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಮೂರು ದಿನಗಳವರೆಗೆ ನಿತ್ಯ ಹೋಮ, ಹವನ, ಸತ್ಯ ನಾರಾಯಣ ಪೂಜೆ ಸೇರಿದಂತೆ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನೆರವೇರಲಿವೆ ಎಂದು ತಿಳಿಸಿದರು.
ವಿಸರ್ಜನೆ ದಿನವಾದ ಮೂರನೇ ದಿನದಂದು ಮಧ್ಯಾಹ್ನ 12 ಗಂಟೆಗೆ ಮೈದಾನ ತೆರವುಗೊಳಿಸಲು ಪಾಲಿಕೆಯ ಸೂಚನೆ ಇದೆ. ಹೀಗಾಗಿ, 12 ಗಂಟೆಯೊಳಗಾಗಿ ವಿಸರ್ಜನಾ ಮೆರವಣಿಗೆ ಆರಂಭಗೊಳ್ಳಲಿದೆ ಎಂದು ಹೇಳಿದರು.
ಸ್ವಾಗತ ಸಮಿತಿ ಅಧ್ಯಕ್ಷ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಬಾಲ ಕೃಷ್ಣ ರೂಪದ ಗಣೇಶ ಪ್ರತಿಷ್ಠಾಪನೆ ಮಾಡಲಾಗುವುದು. ಉತ್ತರ ಕರ್ನಾಟಕ ಭಾಗದ ಜನರು ಗಣೇಶ ದರ್ಶನಕ್ಕಾಗಿ ಹುಬ್ಬಳ್ಳಿಗೆ ಆಗಮಿಸುತ್ತಾರೆ ಎಂದರು.
ಉಪ ಮಹಾಪೌರ ಸಂತೋಷ ಚವ್ಹಾಣ, ಪಾಲಿಕೆ ಸದಸ್ಯೆ ಮೀನಾಕ್ಷಿ ಒಂಟಮೂರಿ, ಬಿಜೆಪಿಯ ಮಹೇಂದ್ರ ಕೌತಾಳ, ಸುಭಾಸಸಿಂಗ್ ಜಮಾದಾರ, ಜಯತೀರ್ಥ ಕಟ್ಟಿ, ಲಿಂಗರಾಜ ಪಾಟೀಲ, ನಾರಾಯಣ ಜರತಾರಘರ, ವೆಂಕಟೇಶ ಕಾಟವೆ ಹಾಗೂ ಇತರರು ಇದ್ದರು.