ಬೆಳಗಾವಿ: ಕರೊನಾ ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಲು ಅನುಕೂಲವಾಗುವಂತೆ ತಾಲೂಕಿನ ಹಾಲಬಾವಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 80 ಹಾಸಿಗೆಗಳ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
ಹಾಲಬಾವಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಗುರುವಾರ ಭೇಟಿ ನೀಡಿ, ವ್ಯವಸ್ಥೆ ಪರಿಶೀಲಿಸಿದ ನಂತರ ಅವರು ಮಾತನಾಡಿ, ಕರೊನಾ ಸೋಂಕು ದೃಢಪಟ್ಟರೂ ಯಾವುದೇ ಲಕ್ಷಣ ಹೊಂದಿರದ ವ್ಯಕ್ತಿಗಳನ್ನು ಮಾತ್ರ ಇಲ್ಲಿಗೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಕರೊನಾ ಸೋಂಕಿನ ಲಕ್ಷಣ ಹೊಂದಿರದಿದ್ದರೂ ಸದ್ಯ ಜಿಲ್ಲಾಸ್ಪತ್ರೆಯಲ್ಲಿರುವ ಕೆಲವರನ್ನು ಗುರುವಾರದಿಂದಲೇ ಸ್ಥಳಾಂತರ ಮಾಡಲಾಗುತ್ತಿದೆ. ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವವರನ್ನು ಜಿಲ್ಲಾಸ್ಪತ್ರೆಯಲ್ಲೇ ಇರಿಸಲಾಗುವುದು. ಹೊಸದಾಗಿ ಸೋಂಕು ದೃಢಪಟ್ಟವರ ಆರೋಗ್ಯ ಪರೀಕ್ಷಿಸಿ, ಜಿಲ್ಲಾಸ್ಪತ್ರೆ ಅಥವಾ ವಸತಿ ಶಾಲೆಯಲ್ಲಿ ದಾಖಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸುಸಜ್ಜಿತ ಸೌಕರ್ಯ: ವಸತಿ ಶಾಲೆಯಲ್ಲಿ ಇರಿಸಲಾಗುವ ಸೋಂಕಿತರಿಗೆ ಸರ್ಕಾರದ ಮಾರ್ಗಸೂಚಿ ಅನುಸಾರ, ಊಟ, ಹಾಸಿಗೆ ಸೇರಿ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಲಾಗಿದೆ. ಪ್ರತ್ಯೇಕವಾಗಿ ವೈದ್ಯಕೀಯ ಮತ್ತು ನಸಿರ್ಂಗ್ ತಂಡಗಳು ನಿರಂತರವಾಗಿ ಕಾರ್ಯ ನಿರ್ವಹಿಸಲಿವೆ. ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ವೀಕ್ಷಣೆಗೆ ಟಿವಿ ಮತ್ತು ಕುಡಿಯಲು ಬಿಸಿ ನೀರು ಒದಗಿಸಲು ಸೋಲಾರ್ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ವೈದ್ಯಕೀಯ ತಂಡಕ್ಕೆ ಸಲಹೆ, ಸೂಚನೆ ನೀಡಿದರು. ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಇತರರಿದ್ದರು.