ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಜೈನ ಸಮುದಾಯದ ಅವಹೇಳನ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಜೈನಧರ್ಮ ಹಿತರಕ್ಷಣಾ ಸಮಿತಿ ಜೈನಕಾಶಿ ಆಶ್ರಯದಲ್ಲಿ ಮೂಡುಬಿದಿರೆ, ಹೊಸ್ಮಾರ್, ನಾರಾವಿ ಸಹಿತ ವಿವಿಧ ಪ್ರದೇಶಗಳ ಸಹಸ್ರಾರು ಮಂದಿ ಜೈನರು ಮಂಗಳವಾರ ಮೂಡುಬಿದಿರೆ ಸಾವಿರ ಕಂಬದ ಬಸದಿಯಿಂದ ಆಡಳಿತ ಸೌಧದವರೆಗೆ ಹಕ್ಕೊತ್ತಾಯ ಮೌನ ಮೆರವಣಿಗೆ ನಡೆಸಿದರು.
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸಾವಿರ ಕಂಬದ ಬಸದಿಯಲ್ಲಿ ಜಾಥಾಕ್ಕೆ ಚಾಲನೆ ನೀಡಿದರು. ಧರ್ಮಸ್ಥಳ ಕ್ಷೇತ್ರ ಮಾದರಿ ಧಾರ್ಮಿಕ ಕೇಂದ್ರ. ಆದರೆ ಕೆಲವು ವಿಘ್ನ ಸಂತೋಷಿಗಳು ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ಜೈನರು ಹಾಗೂ ಹಿಂದುಗಳ ಮಧ್ಯೆ ಅಂತರ ತರುವ ಪ್ರಯತ್ನ ನಡೆಸುತ್ತಿದ್ದಾರೆ. ಇಂತಹ ಪ್ರಯತ್ನಗಳನ್ನು ನಾವು ಸಹಿಸುವುದಿಲ್ಲ. ಕ್ಷೇತ್ರ ಹಾಗೂ ಹೆಗ್ಗಡೆಯವರ ಜತೆ ಸದಾ ನಿಲ್ಲುತ್ತೇವೆ ಎಂದರು.
ಮನವಿ ಸಲ್ಲಿಕೆ: ಲಕ್ಷಾಂತರ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ವ್ಯಕ್ತಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವ ಯೂಟ್ಯೂಬರ್ಸ್ ಮೇಲೆ ಕಾನೂನು ಕ್ರಮ ಕೈಗೊಂಡು ಅಲ್ಪಸಂಖ್ಯಾತ ಜೈನ ಸಮುದಾಯಕ್ಕೆ ರಕ್ಷಣೆ ನೀಡುವಂತೆ ತಹಸೀಲ್ದಾರ್ ಶ್ರೀಧರ ಮುಂದಲಮನಿ ಮೂಲಕ ಸರ್ಕಾರಕ್ಕೆ ಜೈನ ಸಮಾಜದ ಮುಖಂಡರು ಮನವಿ ಸಲ್ಲಿಸಿದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕುಲದೀಪ ಎಂ. ಚೌಟರ ಅರಮನೆ, ಎಕ್ಸಲೆಂಟ್ ವಿದ್ಯಾಸಂಸ್ಥೆ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪುರಸಭೆ ಸದಸ್ಯೆ ಶ್ವೇತಾ ಪ್ರವೀಣ್, ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಪ್ರಮುಖರಾದ ಮಹೇಂದ್ರವರ್ಮ ಜೈನ್, ಶೈಲೇಂದ್ರ ಕುಮಾರ್, ಸಂಪತ್ ಸಾಮ್ರಾಜ್ಯ, ಕೃಷ್ಣರಾಜ ಹೆಗ್ಡೆ, ರಾಜವರ್ಮ ಬೈಲಂಗಡಿ, ಬಾಹುಬಲಿ ಪ್ರಸಾದ್, ಪಟ್ಣಶೆಟ್ಟಿ ಸುದೇಶ್ ಕುಮಾರ್, ಶಾಂತಿಪ್ರಸಾದ್ ಹೆಗ್ಡೆ, ಅಭಿಜಿತ್ ಎಂ., ನಾಗವರ್ಮ ಜೈನ್, ಕೆ.ಪಿ.ಜಗದೀಶ್ ಅಧಿಕಾರಿ, ವಕೀಲರಾದ ದಿವಿಜೇಂದ್ರ, ಶ್ವೇತಾ ಜೈನ್ ಸಹಿತ ಜೈನ ಸಮುದಾಯದವರು ಭಾಗವಹಿಸಿದರು.