ಜಿಲ್ಲೆ

ಸ್ವಾತಂತ್ರ್ಯ ಹೋರಾಟದಲ್ಲಿ ಹಾಜಿ ಅಬ್ದುಲ್ಲ ಸಾಹೇಬ್​ ಕೊಡುಗೆ ಅಪಾರ

ಸಂಶೋಧನಾ ವಿದ್ಯಾರ್ಥಿನಿ ಭಾಗ್ಯಾ ರಾಜೇಶ ಮಾಹಿತಿ

ಉಡುಪಿಯಲ್ಲಿ ಪುಣ್ಯತಿಥಿ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹಾಜಿ ಅಬ್ದುಲ್ಲ ಸಾಹೇಬ್​ ಅವರ ಕೊಡುಗೆ ಅಪಾರವಾಗಿದೆ. ದೇಶವ್ಯಾಪಿ ಸಂಚರಿಸಿ ಸಂಘಟನೆಯಲ್ಲಿ ನಿರತರಾಗಿದ್ದ ಮಹಾತ್ಮ ಗಾಂಧೀಜಿ ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು ಎಂದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿ ಕರ್ನಾಟಕದಲ್ಲಿ ಗಾಂಧಿ ಪ್ರಭಾವ ಕುರಿತು ಸಂಶೋಧನೆ ನಡೆಸುತ್ತಿರುವ ಮೈಸೂರು ವಿವಿಯ ಡಾಕ್ಟರೇಟ್​ ವಿದ್ಯಾರ್ಥಿನಿ ಭಾಗ್ಯಾ ರಾಜೇಶ ತಿಳಿಸಿದರು.

ಉಡುಪಿಯ ಹೆರಿಟೇಜ್​ ಕಾಯಿನ್​ ಮ್ಯೂಸಿಯಂನಲ್ಲಿ ಖಾನ್​ ಬಹದ್ದೂರ್​ ಹಾಜಿ ಅಬ್ದುಲ್ಲ ಮೆಮೋರಿಯಲ್​ ಚಾರಿಟೇಬಲ್​ ಟ್ರಸ್ಟ್​ ಉಡುಪಿ ವತಿಯಿಂದ ಆಯೋಜಿಸಿದ್ದ ಕಾರ್ಪೊರೇಷನ್​ ಬ್ಯಾಂಕ್​ನ ಸ್ಥಾಪಕ ಹಾಜಿ ಅಬ್ದುಲ್ಲ ಸಾಹೇಬ್​ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಟ್ರಸ್ಟ್​ನ ಅಧ್ಯಕ್ಷ ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಮಾತನಾಡಿ, ಹಾಜಿ ಅಬ್ದುಲ್ಲ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ವಿವರವಾಗಿ ತಿಳಿಸಿದರು.

ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ರವಿರಾಜ್​ ಎಚ್​. ಪಿ., ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು, ಸಂಘಟನಾ ಕಾರ್ಯದರ್ಶಿ ಸತೀಶ ಕೊಡವೂರು, ವಸ್ತು ಸಂಗ್ರಹಾಲಯದ ಕ್ಯುರೇಟರ್​ ಜಯಪ್ರಕಾಶ, ಮಾಜಿ ಕ್ಯುರೇಟರ್​ ಕೃಷ್ಣಯ್ಯ, ಅವಿನಾಶ ಕಾಮತ, ಟ್ರಸ್ಟಿ ಸಿರಾಜ್​ ಅಹ್ಮದ್​, ಯೋಗೇಶ್​ ಶೇಟ, ಉಮೇಶ ಆಚಾರ್ಯ ಉಪಸ್ಥಿತರಿದ್ದರು.