ಹಾರೋಹಳ್ಳಿ: ರೈತರ ಪಾಲಿಗೆ ಬಮುಲ್ ತಾಯಿ ಇದ್ದಂತೆ. ಮಕ್ಕಳನ್ನು ತಾಯಿ ಹೇಗೆ ಕಾಪಾಡುತ್ತಾಳೋ, ಆ ರೀತಿ ಹೈನುಗಾರರನ್ನು ಬಮುಲ್ ಕಾಪಾಡುತ್ತಿದೆ ಎಂದು ಬೆಂಗಳೂರು ಹಾಲು ಒಕ್ಕೂಟ (ಬಮುಲ್) ಅಧ್ಯಕ್ಷ ನರಸಿಂಹಮೂರ್ತಿ ಬಣ್ಣಿಸಿದರು.
ಹಾರೋಹಳ್ಳಿಯ ಸರ್ಕಾರಿ ಶಾಲಾ ಆವರಣದಲ್ಲಿ ಬಮುಲ್, ಬೆಂಗಳೂರು ದಕ್ಷಿಣ ಶಿಬಿರ, ಬಮುಲ್ ಕಲ್ಯಾಣ ಟ್ರಸ್ಟ್, ಹಾರೋಹಳ್ಳಿ ಹೋಬಳಿಯ ಹಾಲು ಉತ್ಪಾದಕರ ಸಹಕಾರ ಸಂಘಗಳು ಮತ್ತು ಡಾ. ಚಂದ್ರಮ್ಮ ದಯಾನಂದ ಸಾಗರ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿ ಕೊಂಡಿದ್ದ ಆರೋಗ್ಯ ತಪಾಸಣಾ ಉಚಿತ ಶಿಬಿರದಲ್ಲಿ ಮಾತನಾಡಿ, ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಬಮುಲ್ ಸಹಕಾರಿಯಾಗಿದೆ. ವಿಮೆ, ಆರೋಗ್ಯ ತಪಾಸಣೆ ಸೇರಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ದಕ್ಷಿಣ ಮತ ಕ್ಷೇತ್ರದ ನಿರ್ದೇಶಕ ಎಚ್.ಎಸ್. ಹರೀಶ್ ಕುಮಾರ್ ಮಾತನಾಡಿ, ರೈತರ ಆರೋಗ್ಯ ಕಾಪಾಡುವುದೇ ನಮ್ಮ ಉದ್ದೇಶ. ಆದ್ದರಿಂದ ಆಗಾಗ ಇಂತಹ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಬಮುಲ್ ವತಿಯಿಂದ ಮಿಲ್ಕಿ ಮೆಷಿನ್, ಛಾಪ್ ಕಟ್ಟರ್, ಮ್ಯಾಟ್ ಸೇರಿ ಅನೇಕ ಉಪಕರಣಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ ಎಂದರು.
ಜಿಪಂ ಸದಸ್ಯ ಎಚ್.ಕೆ. ನಾಗರಾಜು ಮಾತನಾಡಿ, ಇಂದಿನ ದಿನಗಳಲ್ಲಿ ಜನರಲ್ಲಿ ವ್ಯವಸಾಯದ ಬಗ್ಗೆ ನಿರಾಸಕ್ತಿ ಇದೆ. ಕಷ್ಟಪಟ್ಟು ದುಡಿದರೆ ಉತ್ತಮ ಸಲು, ಆದಾಯ ಬರುತ್ತದೆ. ಅದರ ಜತೆಗೆ ಉತ್ತಮ ಆರೋಗ್ಯ ಕೂಡ ಕಾಪಾಡಿಕೊಳ್ಳಬಹುದು. ಯುವಸಮುದಾಯ ಇದನ್ನು ಅರ್ಥ ಮಾಡಿಕೊಂಡು ಕೃಷಿಯತ್ತ ಗಮನಹರಿಸಬೇಕು ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಡಿ.ಎಸ್. ಭುಜಂಗಯ್ಯ ಮಾತನಾಡಿ, ಈ ಹಿಂದೆ ಆರೋಗ್ಯ ತಪಾಸಣೆ ಉಚಿತ ಶಿಬಿರ ಏರ್ಪಡಿಸಿದಾಗ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಇದೀಗ ಆಸ್ಪತ್ರೆಗಳು ಹೆಚ್ಚಾಗಿದ್ದರಿಂದ ಜನರು ಇಂತಹ ಶಿಬಿರಗಳಲ್ಲಿ ಭಾಗವಹಿಸಲು ಆಸಕ್ತಿ ವಹಿಸುವುದು ಕಡಿಮೆ ಎಂದರು.
ಬಮುಲ್ ಎಂಡಿ ಸ್ವಾಮಿ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಗೌಡ, ಗ್ರಾಪಂ ಅಧ್ಯಕ್ಷ ಎನ್. ಗುರುಪ್ರಸಾದ್, ರಾಮನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಚ್.ಎಸ್. ಮುರಳೀಧರ್, ದಯಾನಂದ ಸಾಗರ್ ಆಸ್ಪತ್ರೆ ವೈದ್ಯ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆಸಿಬಿ ಅಶೋಕ, ಬಮುಲ್ ಮಾಜಿ ನಿರ್ದೇಶಕ ಶಿವಣ್ಣ, ಬಮುಲ್ ಕಲ್ಯಾಣ ಟ್ರಸ್ಟ್ನ ಡಾ. ಲೋಕೇಶ್, ಪುರುಷೋತ್ತಮ್ ಇತರರು ಇದ್ದರು.
ಶಿಬಿರದಲ್ಲಿ 1,000ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ: ಆರೋಗ್ಯ ತಪಾಸಣೆ ಉಚಿತ ಶಿಬಿರದಲ್ಲಿ ಕಣ್ಣಿನ ಸಮಸ್ಯೆ , ಗಂಟಲು ಸಮಸ್ಯೆ , ಮಧುಮೇಹ, ಹೃದ್ರೋಗ, ಮೂಳೆ ಮತ್ತು ಸಾಮಾನ್ಯ ಕಾಯಿಲೆಗಳಿಗೆ ತಪಾಸಣೆ ನಡೆಸಿ ಔಷಧ ವಿತರಿಸಲಾಯಿತು. ಸುಮಾರು 1,000ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಬಮುಲ್ ಹೈನುಗಾರರಿಗೆ ಅನೇಕ ಸವಲತ್ತುಗಳನ್ನು ಒದಗಿಸುತ್ತಿದೆ. ಅಲ್ಲದೆ, ಹೈನುಗಾರರು ಆಕಸ್ಮಿಕವಾಗಿ ಮರಣ ಹೊಂದಿದರೆ 1 ಲಕ್ಷ ರೂ, ಹಾವು ಕಚ್ಚಿ ಮೃತಪಟ್ಟರೆ 2 ಲಕ್ಷ ರೂ. ಪರಿಹಾರ ಒದಗಿಸಲಾಗುತ್ತಿದೆ. -ಎಚ್.ಎಸ್.ಹರೀಶ್ ಕುಮಾರ್ ಬೆಂಗಳೂರು ದಕ್ಷಿಣ ಮತ ಕ್ಷೇತ್ರದ ನಿರ್ದೇಶಕ