ಜಿಲ್ಲೆ

ಆಲಿಕಲ್ಲು ಮಳೆ, ಪ್ರಾಣಾಪಾಯದಿಂದ ಮಗು ಪಾರು

Belagavi

ಕೋಹಳ್ಳಿ: ಗ್ರಾಮದಲ್ಲಿ ಭಾನುವಾರ ರಾತ್ರಿ ಗಾಳಿಯೊಂದಿಗೆ ಸುರಿದ ಆಲಿಕಲ್ಲು ಮಳೆಗೆ ತಗಡಿನ ಶೆಡ್ ಮನೆಯೊಳಗೆ ತೊಟ್ಟಿಲದಲ್ಲಿ ಮಲಗಿದ್ದ 6 ತಿಂಗಳ ಗಂಡು ಮಗುವಿನ ಸಮೇತ ಪತ್ರಾಸ್ (ತಗಡು) ಹಾರಿ ಹೋದ ಘಟನೆ ಜರುಗಿದ್ದು, ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ಗಾಳಿಗೆ ಬಿದ್ದ ಮರದಡಿ ಸಿಲುಕಿ ಚನ್ನಮಲ್ಲ ಮಂಟೂರ ಅವರ ಎಮ್ಮೆ ಮೃತಪಟ್ಟಿದೆ. ಗ್ರಾಮದ 28 ಕುಟುಂಬಗಳ ಗುಡಿಸಿಲಿನ ಪತ್ರಾಸ್‌ಗಳು ಹಾರಿಹೋಗಿವೆ. ಮಳೆಯಿಂದ ದ್ರಾಕ್ಷಿ, ದಾಳಿಂಬೆ, ಗೋವಿನ ಜೋಳ, ಕಬ್ಬು ಸೇರಿ ಅನೇಕ ಬೆಳೆಗಳು ಹಾನಿಯಾಗಿವೆ.

ಹಾನಿಗೊಳಗಾದ ಸ್ಥಳಕ್ಕೆ ತಾಪಂ ಇಒ ರವೀಂದ್ರ ಬಂಗಾರೆಪ್ಪನ್ನವರ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಂದ ಮನೆಗಳು ಹಾಗೂ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿವೆ. ಇದರ ಬಗ್ಗೆ ಆಯಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರ್ವೇ ಮಾಡುತ್ತಿದ್ದಾರೆ. ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದರು. ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ಜಯಶ್ರೀ ಹಿರೇಮಠ ಸೇರಿ ವಿವಿಧ ಅಧಿಕಾರಿಗಳು ಇದ್ದರು.