ಜಿಲ್ಲೆ

ಗೊರಹಳ್ಳಿ ಗ್ರಾಮದ ಜಮೀನಿನಲ್ಲಿ ಹಗೆ ಪತ್ತೆ

ಲಲಾಟಾಕ್ಷ ಎಸ್

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಗೊರಹಳ್ಳಿ ಗ್ರಾಮದ ರೈತ ಲೋಕೇಶ ಅವರ ಜಮೀನಿನಲ್ಲಿ ಗುರುವಾರ ಹಗೆ (ಹಗೇವು) ಪತ್ತೆಯಾಗಿದೆ.


ಕೃಷಿ ಚಟುವಟಿಕೆಗಾಗಿ ಟ್ರಾೃಕ್ಟರ್‌ನಲ್ಲಿ ಜಮೀನು ಉಳುಮೆ ಮಾಡುವ ಸಂದರ್ಭ ಗುಂಡಿಯೊಂದು ಕಂಡು ಬಂದಿದೆ. ಬಳಿಕ ಅದನ್ನು ಗಮನಿಸಿದಾಗ ಸುಮಾರು 8-10 ಅಡಿ ಆಳವಿದ್ದು, ಒಳಗಡೆ ವೃತ್ತಾಕಾರದಲ್ಲಿ ಅಗಲವಾಗಿದೆ. ಕೆಲ ಸ್ಥಳೀಯರು ಇದನ್ನು ಯಾವುದೋ ಸುರಂಗ ಮಾರ್ಗ ಇರಬೇಕು ಎಂದರೆ, ಇನ್ನು ಕೆಲವರು ಇದು ಪ್ರಾಚೀನ ಕಾಲದ ಬಾವಿ ಇರಬೇಕು ಎನ್ನುತ್ತಿದ್ದರು. ಆರು ವರ್ಷಗಳ ಹಿಂದೆ ಸಮೀಪದ ಸುರಗಳ್ಳಿ ಗ್ರಾಮದಲ್ಲೂ ಇದೇ ರೀತಿ ದೊಡ್ಡದಾದ ಗುಂಡಿಯೊಂದು ಜಮೀನಿನಲ್ಲಿ ಪತ್ತೆಯಾಗಿತ್ತು.

ಈ ಕುರಿತು ಹುಣಸೂರು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ರಾಜಶೇಖರನ್ ವಿಜಯವಾಣಿಗೆ ಮಾಹಿತಿ ನೀಡಿ, ಹಿಂದಿನ ಕಾಲದಲ್ಲಿ ರೈತರು ತಾವು ಬೆಳೆದಂತಹ ಬೆಳೆಗಳು, ದವಸ-ಧಾನ್ಯಗಳ ಸಂರಕ್ಷಣೆಗಾಗಿ ಹಾಗೂ ದಾಳಿ ಕೋರರು ಬಂದಾಗ ಬಚ್ಚಿಟ್ಟುಕೊಳ್ಳುವುದಕ್ಕಾಗಿ ತಮ್ಮ ಜಮೀನಿನ ಭೂಮಿಯಲ್ಲಿ ಕಣಜ ರೂಪದಲ್ಲಿ ಹಗೆಯನ್ನು ನಿರ್ಮಿಸುತ್ತಿದ್ದರು. ಎಷ್ಟು ಅವಶ್ಯಕತೆ ಇದೆ ಅಷ್ಟು ಆಳ ಮಾತ್ರ ಆ ಹಗೆಯನ್ನು ನಿರ್ಮಾಣ ಮಾಡುತ್ತಿದ್ದರು. ಗೊರಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿರುವುದು ಕೂಡ ಹಾಗೆಯೇ ಇರಬಹುದು. ಅಲ್ಲದೆ ಇಲ್ಲಿ ಪ್ರಾಚೀನ ಕಾಲದಲ್ಲಿ ಜನವಸತಿ ಸ್ಥಳವಾಗಿತ್ತು ಎಂದು ತಿಳಿಯಬಹುದಾಗಿದೆ ಎಂದರು.

ಭೂಮಿಯೊಳಗಿನ ಕಣಜ
ಹಿಂದಿನ ಕಾಲದಲ್ಲಿ ತೇವಾಂಶವಿಲ್ಲದ, ಗಟ್ಟಿಯಾದ ಭೂಮಿಯಲ್ಲಿ ತಮ್ಮ ಅನುಕೂಲಕ್ಕೆ ತಕ್ಕ ಆಳ, ಒಳಗೆ ವಿಶಾಲ ಅಗಲವುಳ್ಳ, ಮೇಲ್ಭಾಗ ಒಬ್ಬ ಮನುಷ್ಯ ಸರಾಗವಾಗಿ ಇಳಿದು ಹತ್ತುವಷ್ಟು ಕಿಂಡಿಯುಳ್ಳ ಹಗೆಯನ್ನು ನಿರ್ಮಿಸುತ್ತಿದ್ದರು. ಹೆಚ್ಚುವರಿ ದವಸ ಧಾನ್ಯಗಳನ್ನು ವರ್ಷಾನುಗಟ್ಟಲೇ ಸಂಗ್ರಹಿಸಿಟ್ಟಿರುತ್ತಿದ್ದರು. ಕ್ರಿಮಿ ಕೀಟಗಳ ಬಾಧೆಯಿಲ್ಲದೆ, ಕಳ್ಳಕಾಕರ ಭಯವಿಲ್ಲದೆ ನೈಸರ್ಗಿಕವಾಗಿ ಅತ್ಯಂತ ಸುರಕ್ಷಿತವಾಗಿ ಸಂಗ್ರಹಿಸಿಡಬಹುದಾಗಿತ್ತು. ಕೃಷಿ ಭೂಮಿಯ ಆಧಾರದ ಮೇಲೆ ರೈತರು ಹಗೆಗಳನ್ನು ನಿರ್ಮಿಸಿರುತ್ತಿದ್ದರು.