ಯಲಬುರ್ಗಾ: ಕಳೆದ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಜನರ ಮುಂದೆ ಶಿಕ್ಷಣ ಮತ್ತು ನೀರಾವರಿ ಯೋಜನೆ ಮಾಡುವುದಾಗಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ಯೋಜನೆ ಬಗ್ಗೆ ಕ್ಷೇತ್ರದ ಕಾಂಗ್ರೆಸ್ಸಿಗರು ಮಾಡಿದ ಅಪಹಾಸ್ಯಗಳಿಗೆ ನನ್ನ ಅಭಿವೃದ್ಧಿ ಕಾರ್ಯವೇ ಉತ್ತರ ಎಂದು ಸಚಿವ ಹಾಲಪ್ಪ ಆಚಾರ ಹೇಳಿದರು.
ತಾಲೂಕಿನ ಹಗೇದಾಳ ಹತ್ತಿರ ನಿರ್ಮಾಣವಾಗಿರುವ ಕೃಷ್ಣಾ ಬಿಸ್ಕೀಂ ನೀರಾವರಿ ವ್ಯಾಪ್ತಿಯಲ್ಲಿ ಕೆರೆ ತುಂಬಿಸುವ ಯೋಜನೆಯ ಪಂಪ್ ಹೌಸ್‌ಗೆ ನೀರು ಬಂದಿರುವ ಹಿನ್ನೆಲೆಯಲ್ಲಿ ಬುಧವಾರ ಸ್ಥಳಕ್ಕೆ ಭೇಟಿ ನೀಡಿ, ವೀಕ್ಷಣೆ ಮಾಡಿ ಮಾತನಾಡಿದರು.
2013ರಲ್ಲಿ ನಾನು ಎಂಎಲ್ಸಿ ಆಗಿದ್ದಾಗ ಅಂದಿನ ಸಿಎಂ ಜಗದೀಶ ಶೆಟ್ಟರ್, ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಕರೆಸಿ ಒಂದು ಸಾವಿರ ಕೋಟಿ ರೂ.ವೆಚ್ಚದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಲಾಗಿತ್ತು. ಆದರೆ, ಕಾಂಗ್ರೆಸ್‌ನವರು ಇದಕ್ಕೆ ಅಡ್ಡಗಲ್ಲೆಂದು ಜರಿದರು.
ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಎಂದು ಹೇಳುವ ಮೂಲಕ ಯೋಜನೆಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ. ಕೊಡುವುದಾಗಿ ಜನರನ್ನು ಯಾಮಾರಿಸಿ ಅಧಿಕಾರಕ್ಕೆ ಬಂದರು. ಬಳಿಕ ನಯಾ ಪೈಸೆ ಅನುದಾನ ಬಿಡುಗಡೆ ಮಾಡಲಿಲ್ಲ ಎಂದು ದೂರಿದರು.
ನಾನು ಶಾಸಕನಾದ ಮೇಲೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರಿಂದ ಅನುದಾನ ತಂದು 2ನೇ ಹಂತದ ಕಾಮಗಾರಿ ಆರಂಭಿಸಲಾಯಿತು. ಬಳಿಕ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 1700 ಕೋಟಿ ರೂ. ಅನುದಾನದಲ್ಲಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಶ್ರಮಿಸಿದ್ದೇನೆ ಎಂದರು.
ಬೃಹತ್ ಕಾರ್ಯಕ್ರಮ:
ಕೆರೆ ತುಂಬಿಸುವ ಯೋಜನೆ ಉದ್ಘಾಟನೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕರೆತಂದು ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಪಂಪ್‌ಹೌಸ್‌ಗೆ ನೀರು ಬಂದ ಹಿನ್ನೆಲೆಯಲ್ಲಿ ಕಾರ್ಯಕರ್ತರ ಹರ್ಷ ಕಂಡ ಸಚಿವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಕಾರ್ಯರ್ಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಿವಿಧ ಹಾಡುಗಳಿಗೆ ಡಾನ್ಸ್ ಮಾಡಿದರು. ಸಚಿವರು ಕೂಡ ಹೆಜ್ಜೆ ಸಂತಸಪಟ್ಟರು.
ತಹಸೀಲ್ದಾರ್ ವಿಠಲ್ ಚೌಗಲಾ, ತಾಪಂ ಇಒ ಸಂತೋಷ ಪಾಟೀಲ್, ಕೆಬಿಜೆಎನ್‌ಎಲ್ ಇಇ ಆರ್.ಡಿ.ಬಿರಾದಾರ, ಎಇಇ ಎಸ್.ಒ.ಚನ್ನಪ್ಪ, ಗುತ್ತಿಗೆದಾರ ಜಿ.ಶಂಕರ, ಪ್ರೊಜೆಕ್ಟ್ ವ್ಯವಸ್ಥಾಪಕ ಉದಯ, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಪ್ರಮುಖರಾದ ಬಸಲಿಂಗಪ್ಪ ಭೂತೆ, ರತನ್ ದೇಸಾಯಿ, ಬಸವರಾಜ ಗೌರಾ, ಶಿವಶಂಕರ ದೇಸಾಯಿ, ವೀರಣ್ಣ ಹುಬ್ಬಳ್ಳಿ, ವಿಶ್ವನಾಥ ಮರಿಬಸಪ್ಪನವರ, ಶಿವಪ್ಪ ವಾದಿ, ಶಂಕ್ರಪ್ಪ ಸುರಪುರ, ಅಯ್ಯನಗೌಡ ಕೆಂಚಮ್ಮನವರ್, ಕಳಕಪ್ಪ ಕಂಬಳಿ, ರಾಚಪ್ಪ ಹುರಳಿ, ಹನುಮರೆಡ್ಡಿ ಇತರರಿದ್ದರು.