ಹಗರಿಬೊಮ್ಮನಹಳ್ಳಿ: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಜನನಿ ರತ್ನ ರಾಜ್ಯಪ್ರಶಸ್ತಿ ನೀಡಿ ಗೌರವಿಸಿರುವುದು ಸಾಧಕರ ಜವಾಬ್ದಾರಿ ಹೆಚ್ಚಿಸಿದಂತಾಗಲಿದೆ ಎಂದು ಕನ್ನಡ ವಿವಿ ಸಹಾಯಕ ಕುಲಸಚಿವ ಎಂ.ಎಂ.ಶಿವಪ್ರಕಾಶ್ ಹೇಳಿದರು.
ಹಂಪಾಪಟ್ಟಣ ಗ್ರಾಮದಲ್ಲಿ ಜನನಿ ಸೇವಾ ಟ್ರಸ್ಟ್ ಏರ್ಪಡಿಸಿದ್ದ 2023ನೇ ಸಾಲಿನ ಜನನಿರತ್ನ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಭಾನುವಾರ ಮಾತನಾಡಿದರು.
ಜನನಿ ಟ್ರಸ್ಟ್ ಗ್ರಾಮೀಣ ಭಾಗದಲ್ಲಿ ಪ್ರಶಸ್ತಿ ನೀಡುವ ಮೂಲಕ ಗಣ್ಯರನ್ನು ಕರೆಸಿ ಗ್ರಾಮಸ್ಥರಿಗೆ ಪರಿಚಯಿಸುವ ಮೂಲಕ ಯುವಕರಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿದೆ. ಜನಪದ ಕಲೆ ಗೊಂದಲಿಗರ ಆಟಕ್ಕೆ ರಾಜ್ಯದಲ್ಲಿ ಹಂಪಾಪಟ್ಟಣ ಹೆಸರುವಾಸಿ.
1993ರಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡ ವಿವಿ ಗೊಂದಲಿಗರ ದೇವೇಂದ್ರಪ್ಪ ಅವರ ಐದು ನಾಟಕಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿದೆ. ಇದೀಗ ಮರುಮುದ್ರಣ ಪಡೆದಿರುವುದು ಹೆಮ್ಮೆ ಮೂಡಿಸಿದೆ. ಅವರ ಕುಟುಂಬದವರು ಗೊಂದಲಿಗರ ಆಟವನ್ನು ಪೋಷಣೆ ಮಾಡುತ್ತಿದ್ದಾರೆ ಎಂದರು.
ಸಂಡೂರು ವಿರಕ್ತಮಠದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜನನಿ ಕಲಾ, ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಆರ್.ಖಾಜಾ ಹುಸೇನ್‌ಸಾಬ್, ರಾಜ್ಯ ಬೀಜ ನಿಗಮ ನಿರ್ದೇಶಕ ಎಸ್.ರಾಜೇಂದ್ರ ಪ್ರಸಾದ್, ಪತ್ರಕರ್ತ ಬುಡ್ಡಿ ಬಸವರಾಜ ಮಾತನಾಡಿದರು. ಪ್ರಮುಖರಾದ ಸರ್ಪಭೂಷಣ, ಎಲಿಗಾರ್ ಕುಬೇರಪ್ಪ. ಬಲ್ಲಾಹುಣ್ಸಿ ನಾಗರಾಜ್, ಉಮಾಪತಿ ಶೆಟ್ಟರ್, ಕಣಿವೆಹಳ್ಳಿ ಮಂಜುನಾಥ್, ಎಂ.ಪಿ.ಎಂ.ಮಂಜುನಾಥ್, ಪರಮೇಶ್ವರಯ್ಯ ಸೊಪ್ಪಿಮಠ, ಜಿ.ಶ್ರೀನಿವಾಸ, ವಿ.ಹನುಮಂತ, ಜಿ.ಫಕ್ಕೀರಪ್ಪ ಉಪ್ಪಾರ, ಕನಕಪ್ಪ ಇದ್ದರು. ಟ್ರಸ್ಟ್ ಅಧ್ಯಕ್ಷ ಅಂಬಳಿ ಕೇಶವಮೂರ್ತಿ, ಹನುಮಂತ, ಅಂಬಳಿ ವೀರೇಂದ್ರ ನಿರ್ವಹಿಸಿದರು.
ಈ ವೇಳೆ ಎಚ್.ಡಿ.ಕೋಟೆಯ ಎಂ.ಚಂದ್ರಿಕಾ ದೊರೆಸ್ವಾಮಿ (ಅನಾಥ ರಕ್ಷಕ ರತ್ನ), ಧಾರವಾಡದ ಎ.ದರ್ಗಾ (ಸಾಹಿತ್ಯ ರತ್ನ), ಬೆಂಗಳೂರಿನ ಉಲ್ಲಾಸ (ಪಶುಪಾಲಕ ರತ್ನ), ಹೊಸಪೇಟೆಯ ಡಾ.ಚಂದ್ರಶೇಖರ್ ಕಮತ (ವೈದ್ಯ ರತ್ನ), ಮರಿಯಮ್ಮನಹಳ್ಳಿಯ ಗೋವಿಂದ ಪರಶುರಾಮ (ಸಮಾಜಸೇವಾ ರತ್ನ), ಹಬೊಹಳ್ಳಿಯ ಸುರೇಶನಾಯ್ಕ (ಅರಕ್ಷಕ ರತ್ನ), ದಾವಣಗೆರೆಯ ಕೆ.ರಾಘವೇಂದ್ರ ನಾಯರಿ(ಯಕ್ಷಗಾನ ರತ್ನ), ಹಡಗಲಿಯ ಆರ್.ಬಿ.ಗುರುಬಸವರಾಜ(ಶಿಕ್ಷಣ ರತ್ನ)ಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.