ಜಿಲ್ಲೆ

ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ರೈತರು


ಹಗರಿಬೊಮ್ಮನಹಳ್ಳಿ: ರೈತರಿಗೆ ಅನನುಕೂಲಕ ಸಮಯದಲ್ಲಿ ವಿದ್ಯುತ್ ಪೂರೈಕೆ ಮಾಡುತ್ತಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ರೈತರು ಪಟ್ಟಣದ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಜೆಸ್ಕಾಂ ಎಇಇ ತೇಜ್ಯಾನಾಯ್ಕಾಗೆ ಬುಧವಾರ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ, ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ಏಳು ತಾಸು ವಿದ್ಯುತ್ ಸಂಪರ್ಕ ನೀಡದೇ ಜೆಸ್ಕಾಂ ಸಂಸ್ಥೆ ಮೂರು, ಕೆಲವೊಮ್ಮೆ ನಾಲ್ಕು ತಾಸು ವಿದ್ಯುತ್ ಪೂರೈಸುತ್ತಿರುವುದು ರೈತಾಪಿ ವರ್ಗಕ್ಕೆ ಮಾನಸಿಕವಾಗಿ ಕಿರುಕುಳ ನೀಡಿದಂತಾಗುತ್ತಿದೆ. ಕರೊನಾದಿಂದ ಕಂಗೆಟ್ಟಿರುವ ರೈತರಿಗೆ ಸದ್ಯಕ್ಕೆ ಹೆಚ್ಚು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಈಗಾಗಲೇ ಅಕಾಲಿಕ ಮಳೆಯಿಂದಾಗಿ ರೈತರ ಬೆಳೆಗಳು ಸಂಪೂರ್ಣ ನಾಶವಾಗಿವೆ. ಇನ್ನೂ ನೀರಾವರಿ ಜಮೀನುಗಳಲ್ಲಿ ರೈತರು ಬೆಳೆಯುತ್ತಿರುವ ಆಹಾರ ಸಾಮಗ್ರಿಗಳ ಮೇಲೆ ಮಾರುಕಟ್ಟೆ ಅವಲಂಬಿತವಾಗಿದೆ. ಅದರಲ್ಲೂ ಜೆಸ್ಕಾಂ ರೈತರ ವಿಚಾರದಲ್ಲಿ ಕಿರುಕುಳ ನೀಡುತ್ತಿರುವುದು ಅಸಹನೀಯ. ಶೀಘ್ರವೇ ಸಮಸ್ಯೆಯನ್ನು ಅರಿತು ಜೆಸ್ಕಾಂ ಅಧಿಕಾರಿಗಳು ನಿರಂತರ ವಿದ್ಯುತ್ ಪೂರೈಕೆ ಮುಂದಾಗಬೇಕು. ಅಕ್ರಮ ಸಕ್ರಮ ಯೋಜನೆ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ರೈತರ ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಪರಿವರ್ತಕಗಳನ್ನು ಹೆಚ್ಚುವರಿಯಾಗಿ ನೀಡಬೇಕು ಎಂದರು.

ಜೆಸ್ಕಾಂ ಎಇಇ ತೇಜ್ಯಾನಾಯ್ಕ ಪ್ರತಿಕ್ರಿಯಿಸಿ, ಬೆಳಗ್ಗೆ ಮತ್ತು ಸಂಜೆ 6 ರಿಂದ 9 ರವರೆಗೆ ಹೆಚ್ಚು ವಿದ್ಯುತ್ ಬಳಕೆಯಾಗುವ ನಿಟ್ಟಿನಲ್ಲಿ ವಿದ್ಯುತ್ ವಿತರಣಾ ಕೇಂದ್ರದಿಂದ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಪವರ್‌ಲೋಡ್ ವೈಪರಿತ್ಯವಾಗದಂತೆ ನಿರ್ವಹಿಸುವ ಹಿನ್ನೆಲೆಯಲ್ಲಿ ರೈತರಿಗೆ ಸಮಸ್ಯೆಯಾಗಿದೆ. ಈಗಾಗಲೇ ಮಾಲವಿ, ಉಪ್ಪಾರಗಟ್ಟಿ, ದಶಮಾಪುರ, ವರದಾಪುರಕ್ಕೆ ಹೊಸದಾಗಿ ವಿತರಣಾ ಕೇಂದ್ರ ಆರಂಭಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಕೆ.ಪಿ.ದೇವರಾಜ, ಜಿ.ಲಕ್ಷ್ಮೀಪತಿ, ನಾಗರಾಜ, ಬಸವನಗೌಡ, ಮೃತ್ಯುಂಜಯಗೌಡ, ಎಸ್.ಎಸ್.ಹುಲುಗಪ್ಪ, ಮುಗಲಿ ನಾಗೇಂದ್ರ, ಕೋಲ್ಕರ ಹನುಮಂತಪ್ಪ, ಜಿ.ಪಂಪಾಪತಿ, ಟಿ.ಭಾಗ್ಯಲಕ್ಷ್ಮೀ, ಟಿ.ಶೋಭಾ, ಎಚ್.ಲಕ್ಷ್ಮವ್ವ, ಎಂ.ರತ್ನಮ್ಮ, ಟಿ.ರವಿಕುಮಾರ, ಎಂ.ಇಮಾಮ್‌ಸಾಬ್, ಜೆ.ಎಂ.ರುದ್ರಮುನಿಸ್ವಾಮಿ, ಎ.ರಮೇಶ್, ಒ.ಅರುಣಕುಮಾರ್, ರಾಜಾಸಾಬ್ ಇದ್ದರು.