ಜಿಲ್ಲೆ

ಕೃಷಿಕರು ಕಂಗಾಲಾಗುವ ಪರಿಸ್ಥಿತಿ

ಪ್ರವೀಣ ಉದುಸಾ ದಲಬಂಜನ್

ಹಗರಿಬೊಮ್ಮನಹಳ್ಳಿ: ರೈತರ ಹಿತ ಕಾಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಮಂಡಲದಿಂದ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ರಾಮನಗರದ ಈಶ್ವರ ದೇಗುಲದಿಂದ ಬಸವೇಶ್ವರ ಪುತ್ಥಳಿಯವರೆಗೆ ಪ್ರತಿಭಟನಾ ಮೆರವಣಿಗೆಯ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಮಂಡಲ ಅಧ್ಯಕ್ಷ ಬೆಣಕಲ್ಲು ಪ್ರಕಾಶ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಬಳಿಕ ರೈತರನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ರೈತರಿಗೆ ರಿಯಾಯಿತಿ ಸೌಲಭ್ಯಗಳು ದೊರೆಯುತ್ತಿಲ್ಲ. ಯೂರಿಯಾ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳು ಸರಿಯಾದ ಸಮಯಕ್ಕೆ ಸಿಗದೆ ರೈತರು ಕಂಗಲಾಗಿದ್ದಾರೆ ಎಂದು ಆರೋಪಿಸಿದರು.

ಮಂಡಲ ಮಾಜಿ ಅಧ್ಯಕ್ಷ ವೀರೇಶ್ವರ ಸ್ವಾಮಿ ಮತ್ತು ಹಿಂದುಳಿದ ವರ್ಗಗಳ ಒಕ್ಕೂಟದ ವಿಜಯನಗರ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ, ರಾಜ್ಯದಲ್ಲಿ ಮುಂಗಾರು ಆರಂಭಕ್ಕೂ ಮೊದಲು ರಾಜ್ಯ ಸರ್ಕಾರ ಗಮನ ಹರಿಸಬೇಕಿತ್ತು. ಅಲ್ಲದೆ, ಕೃಷಿ ಸಚಿವರಿಗೂ ಈ ಬಗ್ಗೆ ಕಾಳಜಿ ಇರಬೇಕಿತ್ತು. ರಾಜ್ಯದಲ್ಲಿ ಒಂದೇ ಸಮಯಕ್ಕೆ ರೈತರು ಬಿತ್ತನೆ ಮಾಡುವುದಿಲ್ಲ. ಆದರೂ ರಸಗೊಬ್ಬರ ಮತ್ತು ಬಿತ್ತನೆ ಬೀಜಕ್ಕೆ ರೈತರು ಪರದಾಡುತ್ತಿರುವುದು ಶೋಚನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಯುವ ಮೋರ್ಚಾ ವಿಜಯನಗರ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ ಮಾತನಾಡಿ, ರೈತರೆಂದರೆ ಬರೀ ಬಿಜೆಪಿಯವರಷ್ಟೇ ಅಲ್ಲ. ರಾಜ್ಯದ ಎಲ್ಲ ರೈತರಿಗೂ ಅನ್ಯಾಯವಾಗಿದೆ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಹ ರಸಗೊಬ್ಬಕ್ಕೆ ಪರದಾಡುತ್ತಿದ್ದಾರೆ ಎಂದು ದೂರಿದರು.

ಉಪ ತಹಸೀಲ್ದಾರ್ ಶಿವಕುಮಾರಗೆ ಮನವಿ ಸಲ್ಲಿಸಿದರು. ಪುರಸಭೆ ಸದಸ್ಯರಾದ ಜೋಗಿ ಹನುಮಂತಪ್ಪ, ನವೀನ್ ಕುಮಾರ್, ಪ್ರಮುಖರಾದ ಮರಿಯಮ್ಮನಹಳ್ಳಿ ಕೃಷ್ಣನಾಯ್ಕ, ಕೋಗಳಿ ಹನುಮಂತಪ್ಪ, ಟಿ.ಮಹೇಂದ್ರ, ಯುವರಾಜಗಡ್ಡಿ, ಮಂಜುನಾಥ, ಅಂಗಡಿ ಪಂಪಾಪತಿ, ಬೋರ್‌ವೆಲ್ ತಿಪ್ಪೇಸ್ವಾಮಿ, ದಿವಾಕರಗೌಡ, ಬಸವನಗೌಡ, ಮರಿಯಪ್ಪ, ಅನಿಲ್ ಜಾಣ, ಅಶೋಕ ಗೂಳಿ, ಶಾಂತಮ್ಮ, ಕವಿತಾ, ಪೂಜಾಪ್ಪ, ಮಜ್ಗಿ ನಾಗರಾಜ, ರಾಘವೇಂದ್ರ ಶೆಟ್ಟಿ, ಭಾಷ, ಕರಿಯಪ್ಪ, ಹನುಮನಾಯ್ಕ ಇತರರಿದ್ದರು.