ಹಗರಿಬೊಮ್ಮನಹಳ್ಳಿ: ಗ್ರಾಮೀಣ ಭಾಗದಲ್ಲಿ ವಾತ್ಸಲ್ಯ ಕಾರ್ಯಕ್ರಮದಡಿ ಶೌಚಗೃಹ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರೋತ್ಸಾಹ ನೀಡುತ್ತಿರುವುದು ಅಶಕ್ತರಿಗೆ ಬಯಲು ಶೌಚಮುಕ್ತಿಗೆ ಸಹಕಾರಿಯಾಗಿದೆ ಎಂದು ಯೋಜನಾಧಿಕಾರಿ ಎಚ್.ಎಸ್.ರವೀಂದ್ರ ಹೇಳಿದರು.
ಹಂಪಸಾಗರ ಗ್ರಾಮದಲ್ಲಿ ವಾತ್ಸಲ್ಯ ಕಾರ್ಯಕ್ರಮದಡಿ ಮಂಜೂರಾದ ಶೌಚಗೃಹ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಡಾ.ಹೇಮಾವತಿ ಹೆಗ್ಗಡೆಯವರ ಆಶಯದಡಿ ವಾತ್ಸಲ್ಯ ಕಾರ್ಯಕ್ರಮದಡಿ ನಿರ್ಗತಿಕರು, ಅಶಕ್ತರಿಗೆ ಆದ್ಯತೆ ನೀಡಿ ತಾಲೂಕಿನಲ್ಲಿ ಐವರು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಸ್ನಾನಗೃಹ ಮತ್ತು ಶೌಚಗೃಹ ನಿರ್ಮಾಣಕ್ಕೆ ಮುಂದಾಗಿರುವುದು ಸಾಮಾಜಿಕ ಜಾಗೃತಿ ಮೂಡಿಸುತ್ತ್ತಿದೆ. ಶೌಚಗೃಹದ ಬಳಕೆ ಪ್ರತಿ ಮನೆಗಳಲ್ಲಿ ಕಡ್ಡಾಯವಾಗಿರುವ ಹಿನ್ನಲೆಯಲ್ಲಿ ನೈರ್ಮಲ್ಯಕ್ಕೆ ಆದ್ಯತೆ ನೀಡಿ ಇಂತಹ ಯೋಜನೆ ರೂಪಿಸಲಾಗಿದೆ ಎಂದರು.
ಗ್ರಾಪಂ ಉಪಾಧ್ಯಕ್ಷೆ ಮಮತಾ, ಗ್ರಾಪಂ ಸದಸ್ಯ ಬಿ.ಪ್ರಕಾಶ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಜಿ.ಎಸ್.ಸುಮಾ, ಮೇಲ್ವಿಚಾರಕ ಜಗದೀಶ್ ಹಾಗೂ ಒಕ್ಕೂಟದ ಪದಾಧಿಕಾರಿಗಳು ಮತ್ತು ಸೇವಾಪ್ರತಿನಿಧಿಗಳಿದ್ದರು.