ಹಗರಿಬೊಮ್ಮನಹಳ್ಳಿ: ಹಸೆಮಣೆ ಏರಬೇಕಿದ್ದ ವರ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಪಟ್ಟಣದ ಹಳೇ ಊರು ಹೊರವಲಯದ ಅಶೋಕ ಫಾರ್ಮ್‌ಹೌಸ್‌ಗೆ ಹೋಗುವ ರಸ್ತೆ ಅಪಘಾತದಲ್ಲಿ ಭಾನುವಾರ ರಾತ್ರಿ ಪುರಸಭೆಯ ಸದಸ್ಯೆ ಸರಸ್ವತಿ ಗುಂಡ್ರು ಹನುಮಂತಪ್ಪ ಅವರ ಹಿರಿಯ ಪುತ್ರ ಗುಂಡ್ರು ಮನೋಜ್(25) ಮೃತಪಟ್ಟಿದ್ದಾರೆ.
ಫಾರ್ಮ್‌ಹೌಸ್‌ಗೆ ತೆರಳುವಾಗ ಸ್ಕೂಟಿ ನಿಯಂತ್ರಣ ತಪ್ಪಿದೆ. ಆಗ ರಸ್ತೆ ಬದಿಯ ಆರೇಳು ಅಡಿಯ ಚರಂಡಿಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವೇಗವಾಗಿ ವಾಹನ ಚಲಾಯಿಸಿದ್ದರಿಂದ ಸ್ಕೂಟಿ ಸ್ಕಿಡ್ ಆಗಿ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಎಎಸ್ಪಿ ಸಲೀಂಪಾಷಾ, ಡಿವೈಎಸ್ಪಿ ಮಲ್ಲೇಶ್ ಮಲ್ಲಾಪುರ, ಸಿಪಿಐ ವಿಕಾಸ್ ಲಮಾಣಿ, ಪಿಎಸ್‌ಐ ಬಸವರಾಜ್ ಅಡವಿಬಾವಿ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವಕನಿಗೆ ಡಿ.20 ರಂದು ಮದುವೆ ನಿಶ್ಚಯವಾಗಿತ್ತು. ಈಗಾಗಲೇ ಮದುವೆಯ ಆಹ್ವಾನ ಪತ್ರಿಕೆಗಳನ್ನು ವಿತರಿಸಲಾಗಿತ್ತು.