ಜಿಲ್ಲೆ

ಮಸಣ ಕಾರ್ಮಿಕರಿಂದ ಪತ್ರ ಚಳವಳಿ

ನರೇಶ್ ಕುಮಾರ್

ಹಗರಿಬೊಮ್ಮನಹಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕು ಮಸಣ ಕಾರ್ಮಿಕರ ಸಂಘಟನೆ ಗುರುವಾರ ಪಟ್ಟಣದ ರಾಮನಗರದ ಅಂಚೆ ಕಚೇರಿ ಬಳಿ ಸಿಎಂಗೆ ಬರೆದ ಪತ್ರಗನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಸಂಘದ ಜಿಲ್ಲಾಧ್ಯಕ್ಷ ಬಿ.ಮಾಳಮ್ಮ ಮಾತನಾಡಿ, ನಮ್ಮವರು ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಸಮಾಜ, ಸರ್ಕಾರ ಗುರುತಿಸುತ್ತಿಲ್ಲ. ಕಳೆದ 10 ವರ್ಷಗಳಿಂದ ನಾವು ಹೋರಾಟ ಮಾಡುತ್ತ ಬಂದ ಪರಿಣಾಮ ಕೆಲ ಸೌಲಭ್ಯಗಳು ದೊರೆತಿವೆ. ಅದರಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಶೇ.10 ಮೀಸಲಾತಿ ನೀಡಲಾಗಿದೆ.

ಆದರೆ, ಮಸಣ ಕಾರ್ಮಿಕರು ಎಂದು ಸರ್ಕಾರ ಅಧಿಕೃತವಾಗಿ ಗುರುತಿಸದೆ ಸೌಲಭ್ಯ ಪಡೆಯಲು ಸಮಸ್ಯೆ ಆಗಿದೆ. ಆದ್ದರಿಂದ ಗಣತಿ ಮತ್ತು 45 ವರ್ಷಗಳ ಮೇಲ್ಪಟ್ಟವರಿಗೆ ಮಾಸಾಶನ ಹಾಗೂ ಕುಣಿಗಳನ್ನು ತೆಗೆಯುವ ಕೆಲಸವನ್ನು ಖಾತ್ರಿ ಯೋಜನೆಯಡಿ ಪರಿಗಣಿಸಬೇಕು. ಅಗತ್ಯ ಪರಿಕರಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.

ಸಂಘಟನೆಯ ಹನುಮಂತಪ್ಪ ಪೂಜಾರ್, ಎಸ್.ಹುಲುಗಪ್ಪ, ಹುಡುಚಪ್ಪ, ಅಭಿಷೇಕ, ಮಹೇಂದ್ರ, ದುರುಗಪ್ಪ, ಮೈಲಪ್ಪ, ಸಿಐಟಿಯು ಕಾರ್ಯದರ್ಶಿ ಎಸ್.ಜಗನ್ನಾಥ್, ವಿಮುಕ್ತಯ ದೇವದಾಸಿಯರ ಸಂಘದ ತಾಲೂಕು ಕಾರ್ಯದರ್ಶಿ ಚಾಂದ್‌ಬೀ ಇತರರಿದ್ದರು.