ಹಗರಿಬೊಮ್ಮನಹಳ್ಳಿಯ ತಾಲೂಕು ಆಡಳಿತ ಸೌಧದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವ ಪೂರ್ವಾಭಾವಿ ಸಭೆ ಶುಕ್ರವಾರ ನಡೆಯಿತು. 
ಜಿಲ್ಲೆ

ಕಿತ್ತೂರು ಚನ್ನಮ್ಮ ವಿಜಯೋತ್ಸವ ಸರಳ

ಹಗರಿಬೊಮ್ಮನಹಳ್ಳಿ: ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವವನ್ನು ಅ.23ರಂದು ತಾಲೂಕು ಆಡಳಿತದಿಂದ ಸರಳವಾಗಿ ಆಚರಿಸಲಾಗುವುದು ಎಂದು ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷರೂ ಆದ ತಹಸೀಲ್ದಾರ್ ಆರ್.ಕವಿತಾ ತಿಳಿಸಿದರು.

ಪಟ್ಟಣದ ಆಡಳಿತ ಸೌಧದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ಮುಖಂಡರು ಮಾತನಾಡಿ, ಸಮಾಜದ ಸಹಯೋಗದೊಂದಿಗೆ ಪಟ್ಟಣದಲ್ಲಿ ಅದ್ದೂರಿಯಾಗಿ ಜಯಂತಿ ಆಚರಿಸಬೇಕೆಂದು ಮನವಿ ಮಾಡಿದರು. ತಹಸೀಲ್ದಾರ್ ಪ್ರತಿಕ್ರಿಯಿಸಿ, ಜಯಂತಿಗಳಿಗೆ ಸರ್ಕಾರದ ಯಾವುದೇ ಅನುದಾನ ಇರುವುದಿಲ್ಲ. ಅದ್ದರಿಂದ ಆಡಳಿತ ಸೌಧದಲ್ಲಿ ಸರಳವಾಗಿ ಆಚರಿಸಲಾಗುತ್ತಿದ್ದು, ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.

ಸಮಾಜದ ಜಿಲ್ಲಾ ಕಾರ್ಯದರ್ಶಿ ಸೊನ್ನದ್ ಗುರುಬಸವರಾಜ್ ಮಾತನಾಡಿ, ರಾಣಿ ಚನ್ನಮ್ಮ ವಿಜಯೋತ್ಸವವನ್ನು ಎಲ್ಲ ಕಚೇರಿ ಹಾಗೂ ಶಾಲಾ ಕಾಲೇಜುಗಳಲ್ಲಿ ಆಚರಿಸಬೇಕು ಎಂದು ಒತ್ತಾಯಿಸಿದರು. ಅದಕ್ಕೆ ತಹಸೀಲ್ದಾರ್ ಕವಿತಾ ಸಮ್ಮತಿಸಿದರು.

ಉಪತಹಸೀಲ್ದಾರ್ ಶಿವಕುಮಾರ್, ಸಮುದಾಯದ ಮುಖಂಡರಾದ ವೈ.ಮಲ್ಲಿಕಾರ್ಜುನ, ಬಾವಿ ರವೀಂದ್ರ, ಹನಸಿ ಸಿದ್ದೇಶ, ನರೇಗಲ್ ಮಲ್ಲಿಕಾರ್ಜುನ, ಬ್ಯಾಸಗಿದೇರಿ ಗ್ರಾಪಂ ಅಧ್ಯಕ್ಷ ಎಂ.ಡಿ.ಬಸವನಗೌಡ, ಬೆಣಕಲ್ ಪ್ರಕಾಶ್, ಎಚ್.ಎ.ಕೊಟ್ರೇಶ, ಕುಂಟೂರು ನಿಂಗಪ್ಪ, ಭೋಜಪ್ಪ, ಸಂಚಿ ಶಿವಕುಮಾರ್, ಇಟ್ಟಿಗಿ ಗುರುಬಸವರಾಜ್, ಜ್ಯೋತೆಪ್ಪ, ನಿವೃತ್ತ ಶಿಕ್ಷಕ ನೀಲಪ್ಪ, ಫೋಟೋ ವೀರೇಶ, ಎಂ.ಗುರು, ಬೆಣಕಲ್ ಶಶಿಧರ, ಭದ್ರವಾಡಿ ಸುರೇಶ, ಚಿಲುಗೋಡು ಕರಿಯಪ್ಪ, ಶ್ರೀಧರ ಇದ್ದರು.

ಇಂದು ಪೂರ್ವಭಾವಿಸಭೆ: ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವ ಅದ್ದೂರಿ ಆಚರಣೆಗೆ ನಿಮಿತ್ತ ಪಟ್ಟಣದ ಹರ ದೇಗುಲದ ಭವನದಲ್ಲಿ ಅ.19ರಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೋಷಕರ ಸಮಿತಿ, ಯುವ ಸಮಿತಿ, ಮಹಿಳಾ, ಕಿತ್ತೂರು ರಾಣಿ ಚನ್ನಮ್ಮ ಸಹಕಾರಿ ಮತ್ತು ಪಂಚಮಸಾಲಿ ಬ್ಯಾಂಕ್‌ಗಳ ಹಾಗೂ ಹರ ವಿದ್ಯಾಲಯ ಸಮಿತಿ ಪದಾಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಸಮಾಜದ ತಾಲೂಕು ಅಧ್ಯಕ್ಷ ಅಕ್ಕಿ ಶಿವಣ್ಣ ತಿಳಿಸಿದ್ದಾರೆ.