ಜಿಲ್ಲೆ

ಕನ್ಹಯ್ಯಲಾಲ್ ಹಂತಕರಿಗೆ ಉಗ್ರಶಿಕ್ಷೆ ವಿಧಿಸಿ; ಹಿಂದುಪರ ಸಂಘಟನೆಗಳ ಆಗ್ರಹ

ಹ.ಬೊ.ಹಳ್ಳಿ ತಹಸೀಲ್ದಾರ್‌ಗೆ ಮನವಿ

ಹಗರಿಬೊಮ್ಮನಹಳ್ಳಿ: ಉದಯಪುರದಲ್ಲಿ ಕನ್ಹಯ್ಯಲಾಲ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಉಗ್ರಶಿಕ್ಷೆ ವಿಧಿಸಲು ಆಗ್ರಹಿಸಿ ಪಟ್ಟಣದ ತಹಸಿಲ್ ಕಚೇರಿಯಲ್ಲಿ ಹಿಂದು ಜನಜಾಗೃತಿ ಸಮಿತಿ ನೇತೃತ್ವದಲ್ಲಿ ವಿವಿಧ ಹಿಂದುಪರ ಸಂಘಟನೆಗಳ ಪದಾಧಿಕಾರಿಗಳು ತಹಸೀಲ್ದಾರ್ ಕೆ.ಶರಣಮ್ಮಗೆ ಶುಕ್ರವಾರ ಮನವಿ ಸಲ್ಲಿಸಿದರು.

ಸಮಿತಿ ಕಾರ್ಯಕರ್ತೆ ಸಂಗೀತಾ ಜನ್ನು ಮಾತನಾಡಿ, ರಾಜಸ್ಥಾನದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಕನ್ಹಯ್ಯಲಾಲ್ ಹತ್ಯೆಗೈದು, ಹಿಂದುಗಳನ್ನು ಸೇರಿ ಪ್ರಧಾನಿ ನರೇಂದ್ರ ಮೋದಿಯನ್ನು ಹತ್ಯೆ ಮಾಡುವುದಾಗಿ ಧಮಕಿ ಹಾಕಿರುವುದು ಭಯಾನಕವಾಗಿದೆ. ರಾಜಸ್ಥಾನದ ಕಾಂಗ್ರೆಸ್ ಆಡಳಿತದ ಮುಸ್ಲಿಂ ಓಲೈಕೆಯ ಫಲವಾಗಿ ಮತಾಂಧ ಶಕ್ತಿಗಳು ಹಿಂದುಗಳನ್ನು ನಾಮಾವಶೇಷ ಮಾಡುವ ಕೃತ್ಯವನ್ನು ನಿರಂತರವಾಗಿ ನಡೆಸುತ್ತಿದ್ದಾರೆ.

ಏ.3ರಂದು ರಾಜಸ್ಥಾನದ ಕರೋಳಿಯಲ್ಲಿ ಹೊಸವರ್ಷಾಚಾರಣೆ ಮೆರವಣಿಗೆ ಮೇಲೆ ಮತಾಂಧರು ಆಕ್ರಮಣ ಮಾಡಿ, 50 ಹಿಂದುಗಳ ವಾಹನ, ಅಂಗಡಿಗಳನ್ನು ಸುಟ್ಟು ಹಾಕಿದ್ದಾರೆ. ಮೇ 22ರಂದು ರಾಜಸ್ಥಾನದ ಜೋದಪುರದಲ್ಲಿ ದಲಿತ ಹಿಂದು ಕುಟುಂಬದ ಮೇಲೆ ರೋಹಿಂಗ್ಯಾ ಮತಾಂಧರು ಆಕ್ರಮಣ ಮಾಡಿದ್ದಾರೆ. ಮೇ 12ರಂದು ರಾಜಸ್ಥಾನದ ಹನುಮಂಗರ್‌ದಲ್ಲಿ ವಿಹಿಂಪ ಮುಖಂಡ ಸತ್ವೀರ್ ಸಹರಣ ಮೇಲೆ ಮತಾಂಧರು ಆಕ್ರಮಣ ಮಾಡಿದ್ದಾರೆ. ಜೂ.1ರಂದು ರಾಜಸ್ಥಾನದ ಚಿತ್ತೊರಗರದಲ್ಲಿ ಹಿಂದು ನಾಯಕ ರಾಕೇಶ್ ಸಿಂಗ್ ಅವರನ್ನು ಬರ್ಭರವಾಗಿ ಹತ್ಯೆ ಮಾಡಿದ್ದಾರೆ. ಅ.10ರಂದು ಹಿಂದು ಯುವಕ ರಷಿರಾಜ್ ಜಿಂದಾಲ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೇ.7ರಂದು ಬಲ್ವಾರ್ ನಗರದಲ್ಲಿ ಹಿಂದು ಯುವ ಮುಖಂಡ ಆದರ್ಶ ತಪೊಡಿಯನನ್ನು ಮತಾಂಧರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇದು ಹಿಂದುಗಳ ಅಸ್ತಿತ್ವದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ಶೀಘ್ರವೇ ರಾಜಸ್ಥಾನದಲ್ಲಿ ಹಿಂದುಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಮತಾಂಧರಿಗೆ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಹಿಂದು ಜನಜಾಗೃತಿ ಸಮಿತಿ, ಶ್ರೀರಾಮಸೇನೆ, ಬಜರಂಗದಳ, ವಿಶ್ವ ಹಿಂದು ಪರಿಷತ್ ಬೆಂಬಲ ಸೂಚಿಸಿದ್ದರು. ಪ್ರಮುಖರಾದ ಪೂಜಾ, ರವಿಕುಮಾರ್, ಎ.ಚಂದ್ರಶೇಖರ್, ಸಂತೋಷ್ ಪೂಜಾರ, ನಾಗರಾಜ್ ಚಿಂತ್ರಪಳ್ಳಿ, ಕೊಟ್ರೇಶ್, ಈಶ, ವೀರೇಂದ್ರ, ಹುಲ್ಮನಿ ಮಂಜುನಾಥ, ಕೊಟ್ರೇಶ್ ಹಂಪಾಪಟ್ಟಣ, ಉದಯ್ ಕುಮಾರ್, ನೀಲಪ್ಪ, ಪ್ರಹ್ಲಾದ್, ಮಂಜುನಾಥ್ ಇತರರಿದ್ದರು.