ಹಗರಿಬೊಮ್ಮನಹಳ್ಳಿ ಸಮುದಾಯ ಭವನದ ಮುಂದಿನ ರಾಜ್ಯ ಹೆದ್ದಾಯಲ್ಲಿ ಗುಂಡಿ ಬಿದ್ದಿರುವುದು. 
ಜಿಲ್ಲೆ

ಮೃತ್ಯುಕೂಪವಾದ ರಸ್ತೆ ಗುಂಡಿಗಳು

ವಿಶ್ವನಾಥ ಬಾವಿಕಟ್ಟಿ

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಹಾದು ಹೋಗಿರುವ ಶಿವಮೊಗ್ಗ-ಹೊಸಪೇಟೆ ರಾಜ್ಯ ಹೆದ್ದಾರಿ ಹಾಳಾಗಿ ಗುಂಡಿಗಳು ಮೃತ್ಯುಕೂಪವಾಗಿ ಪರಿಣಮಿಸಿವೆ. ಸವಾರರು ಗುಂಡಿಗಳನ್ನು ತಪ್ಪಿಸಲು ಹೋಗಿ ಪ್ರಾಣ ಕಳೆದುಕೊಂಡರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ.

ಈ ರಾಜ್ಯ ಹೆದ್ದಾರಿಯಲ್ಲಿ ಪುರಸಭೆ ಸಮುದಾಯ ಭವನ, ಪಿಎಲ್‌ಡಿ ಬ್ಯಾಂಕ್, ಆರ್‌ಎಸ್‌ಎಸ್‌ಎನ್ ಬ್ಯಾಂಕ್, ಶಾಲೆ ಹಾಗೂ ಕೋರ್ಟ್ ಇದ್ದು, ಜನನಿಬಿಡ ಪ್ರದೇಶವಾಗಿದೆ. ಇವುಗಳ ಮುಂದಿನ ರಾಜ್ಯ ಹೆದ್ದಾರಿ ಗುಂಡಿಗಳಿಂದ ಕೂಡಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಚಾಲಕರು ಸಂಕಷ್ಟ ಎದುರಿಸುವಂತಾಗಿದೆ.

ಬೈಪಾಸ್‌ನಲ್ಲಿ ಹಗರಿಹಳ್ಳದ ಸೇತುವೆ ಮೇಲ್ಭಾಗ ಹಾಳಾಗಿದ್ದು, ತಗ್ಗು-ಗುಂಡಿಗಳಿಂದ ಕೂಡಿದೆ. ಸಿಸಿ ರಸ್ತೆಯಲ್ಲಿ ಕಬ್ಬಿಣದ ಕಂಬಿಗಳು ಕಾಣುತ್ತಿವೆ. ಮಳೆ ಬಂದಾಗ ಹಾಗೂ ರಾತ್ರಿ ಪ್ರಾಣ ಕೈಯಲ್ಲಿ ಹಿಡಿದು ಓಡಾಡಬೇಕಾಗಿದೆ. ಆಟೋಗಳು, ವಾಹನಗಳು ಚಲಿಸುವಾಗ ಎಚ್ಚರ ತಪ್ಪಿದರೆ ಅಪಾಯ ಖಚಿತ ಎನ್ನು ಪರಿಸ್ಥಿತಿ ಇದೆ.

ಹೊಸಪೇಟೆ ಮಾರ್ಗದಲ್ಲಿ ಗಾಳೆಮ್ಮ ದೇಗುಲದಿಂದ ಪಿಂಜಾರ್ ಹೆಗ್ಡಾಳ್‌ವರೆಗೆ ರಾಜ್ಯ ಹೆದ್ದಾರಿ ಇದ್ದು, ವಾಹನಗಳ ಸವಾರರು ತಗ್ಗು ತಪ್ಪಿಸಲು ಹೋಗಿ ಅಪಘಾತಗಳಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಮಗಿಮಾವಿನಹಳ್ಳಿಯ ರಸ್ತೆ ಹರ ದೇಗುಲದಿಂದ ನಾಲ್ಕು ಕಿ.ಮೀ. ಸರ್ಕಸ್ ಮಾಡಿಕೊಂಡು ಓಡಾಡಬೇಕಾಗಿದೆ.

ಹಗರಿಬೊಮ್ಮನಹಳ್ಳಿ ಬೈಪಾಸ್‌ನ ಹಗರಿ ಸೇತುವೆ ಸಿಸಿ ರಸ್ತೆಯಲ್ಲಿ ಕಬ್ಬಣದ ಕಂಬಿಗಳು ಹೊರಬಂದಿರುವುದು.
ಗುಂಡಿಬಿದ್ದ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಲಾಗಿದೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಬೈಪಾಸ್ ರಸ್ತೆಗಳಲ್ಲೂ ಅಪಾಯಕಾರಿ ಗುಂಡಿಗಳಿವೆ. | ಬಾಬು ಎಸ್.ಎಸ್.ವಲಿ ಆಟೋ ಚಾಲಕ, ಹಬೊಹಳ್ಳಿ ರಸ್ತೆಗಳ ದುರಸ್ತಿ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ವಿದ್ಯಾರ್ಥಿಗಳು ಸಂಚರಿಸುವ ರಸ್ತೆಗಳ ದುರಸ್ತಿ ಕಾರ್ಯ ಮೊದಲು ಕೈಗೊಳ್ಳಲಿ. | ದೀಪಕ್ ಸಾ ಕಠಾರೆ ಪುರಸಭೆ ಸದಸ್ಯ, ಹ.ಬೊ.ಹಳ್ಳಿ ರಸ್ತೆಗಳ ದುರಸ್ತಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕಾರ್ಯಾದೇಶ ನೀಡಬೇಕಿದೆ. ಮಳೆಯಿಂದಾಗಿ ರಸ್ತೆಯಲ್ಲಿನ ಸಣ್ಣ ಗುಂಡಿಗಳು ದೊಡ್ಡದಾಗಿವೆ. ಗುಂಡಿ ಮುಚ್ಚುವ ಕಾಮಗಾರಿ ಶೀಘ್ರ ಕೈಗೊಳ್ಳಲಾಗುವುದು | ಸತೀಶ ನಾಯ್ಕ ಪಿಡಬ್ಲುೃಡಿ ಎಇಇ, ಹ.ಬೊ.ಹಳ್ಳಿ