ಹಗರಿಬೊಮ್ಮನಹಳ್ಳಿ: ಇಲ್ಲಿನ ರಾಮ್‌ರಹೀಂ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಬಾಲಕರ ಮೆಟ್ರಿಕ್ ನಂತರದ ಹಾಸ್ಟೆಲ್‌ನಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಎಸ್‌ಎಫ್‌ಐ ತಾಲೂಕು ಸಮಿತಿ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಸಮಿತಿ ಸದಸ್ಯ ನಾಗರಾಜ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ ನಿಲಯ ಪಾಲಕರಿಗೆ ಅನೇಕ ಬಾರಿ ಮನವಿ ಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದಷ್ಟು ಬೇಗ ಹಾಸ್ಟೆಲ್‌ನಲ್ಲಿ ಅಗತ್ಯ ಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.
ಎಸ್‌ಎಫ್‌ಐ ಹಾಸ್ಟೆಲ್ ಘಟಕದ ಕಾರ್ಯದರ್ಶಿ ಅಜಯ್ ಮಾತನಾಡಿ, ಶುದ್ಧ ಕುಡಿವ ನೀರಿನ ಯಂತ್ರ ಸರಿಪಡಿಸಬೇಕು. ಕಂಪ್ಯೂಟರ್ ಶಿಕ್ಷಣ, ಸಿಸಿ ಕ್ಯಾಮರಾ ಅಳವಡಿಕೆ ಮತ್ತು ಪಠ್ಯಕ್ರಮದ ಅನುಸಾರ ಪುಸ್ತಕಗಳು ಸಿಗುವಂತಾಗಬೇಕು. ಶೌಚಗೃಹ ಹಾಗೂ ಸ್ನಾನದ ಕೊಠಡಿಗಳ ಕಿಟಕಿ ಬಾಗಿಲುಗಳು, ಪ್ಲಂಬಿಂಗ್, ಎಲೆಕ್ಟ್ರಿಕಲ್, ಸೋಲಾರ್ ವಾಟರ್ ಹಾಗೂ ವಿದ್ಯುತ್ ದೀಪಗಳ ದುರಸ್ತಿ ಮಾಡಿಸಬೇಕು. ತಟ್ಟೆ, ಲೋಟ ಇತರ ಪರಿಕರಗಳನ್ನು ಒದಗಿಸಬೇಕು. ಸ್ಪೋಟ್ಸ್ ಕಿಟ್ ಕಲ್ಪಿಸಬೇಕು. ಇಲ್ಲದಿದ್ದರೆ ವಸತಿ ನಿಲಯಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಬಳಿಕ ಉಪತಹಸೀಲ್ದಾರ್ ಶಿಲ್ಪಾಗೆ ಮನವಿ ಸಲ್ಲಿಸಿದರು.
ಎಸ್‌ಎಫ್‌ಐ ತಾಲೂಕು ಸಮಿತಿ ಉಪಾಧ್ಯಕ್ಷ ದಿನೇಶನಾಯ್ಕ, ಸದಸ್ಯರಾದ ಮೋಹನ್, ವಿಜಯ್, ಭೋವಿ ಅಜಯ್, ಮಿತ್ಯನಾಯ್ಕ, ನಕುಲ, ಗಾಂಧಿ, ಶಿವು ನಾಯ್ಕ, ಹುಲಿಗೇಶ್, ಆಕಾಶ್, ದರ್ಶನ್, ವಿನಯ್, ಹೇಮಂತ, ನರಸಿಂಹಮೂರ್ತಿ, ಸುನಿಲ್, ವೀರೇಶ್, ಕಾರ್ತಿಕ್ ಇತರರಿದ್ದರು.