ಹಗರಿಬೊಮ್ಮನಹಳ್ಳಿಯಲ್ಲಿ ಮಾಜಿ ಸೈನಿಕರ ಸಂಘದ ತಾಲೂಕು ಘಟಕವನ್ನು ಭಾನುವಾರ ಉದ್ಘಾಟಿಸಲಾಯಿತು. ಸಂಘದ ರಾಜ್ಯಾಧ್ಯಕ್ಷ ಡಾ.ಎನ್.ಕೆ.ಶಿವಣ್ಣ, ನೂತನ ತಾಲೂಕಾಧ್ಯಕ್ಷ ಎಂ.ರಾಮರೆಡ್ಡಿ, ಹೂವಿನಹಡಗಲಿಯ ಹಿರಿಶಾಂತವೀರ ಸ್ವಾಮೀಜಿ ಇತರರಿದ್ದರು. 
ಜಿಲ್ಲೆ

ಮಾಜಿ ಸೈನಿಕರೆಂದರೆ ಸರ್ಕಾರಕ್ಕೆ ತಾತ್ಸಾರ

ಹಗರಿಬೊಮ್ಮನಹಳ್ಳಿ: ರೀಲ್ ಹೀರೋಗಳಿಗೆ (ಸಿನಿಮಾ ನಟರು) ತೋರುವ ಗೌರವ ಮತ್ತು ಅಭಿಮಾನ ಶೇ.1 ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ರಿಯಲ್ ಹಿರೋಗಳಿಗೆ ಸಿಗುತ್ತಿಲ್ಲ ಎಂದು ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ.ಎನ್.ಕೆ.ಶಿವಣ್ಣ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿದ್ಯಾರಣ್ಯ ಸಭಾಮಂಟಪದಲ್ಲಿ ಭಾನುವಾರ ಮಾಜಿ ಸೈನಿಕರ ಸಂಘದ ತಾಲೂಕು ಘಟಕ ಉದ್ಘಾಟಿಸಿ ಮಾತನಾಡಿದರು.

ಮಾಜಿ ಸೈನಿಕರು ಕೇವಲ ಸನ್ಮಾನಕ್ಕೆ ಸೀಮಿತವಾಗಿದ್ದಾರೆ. ಇವರ ಬಗ್ಗೆ ಸಮಾಜದಲ್ಲಿ ನಾಟಕೀಯ ದೇಶಪ್ರೇಮ ಕಾಣುತ್ತಿದೆ. ಗಡಿಯಲ್ಲಿ ಸಂಕಷ್ಟಗಳನ್ನು ಅನುಭವಿಸಿ ಸೇವೆ ಸಲ್ಲಿಸಿದವರಿಗಿಂತ ಸೈನಿಕರ ಬಗ್ಗೆ ಭಾವನಾತ್ಮಕವಾಗಿ ಭಾಷಣ ಮಾಡಿದವರು ಹೆಚ್ಚಿನ ಹೆಸರು ಗಿಟ್ಟಿಸಿಕೊಂಡಿದ್ದಾರೆ. ಸೇವಾ ಕ್ಷೇತ್ರಗಳೆಲ್ಲ ವಾಣಿಜ್ಯಮಯಗೊಂಡಿವೆ. ನಿವೃತ್ತರಾದ ಬಳಿಕ ಸೈನಿಕರು, ಅವರ ಕುಟುಂಬದವರು ಕಾನೂನುಬದ್ಧ ಸೌಲಭ್ಯ ಪಡೆಯಲು ಹರಸಾಹಸಪಡಬೇಕಿದೆ. ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಸೈನಿಕ ವರ್ಗದ ಬಗ್ಗೆ ತೀರಾ ತಾತ್ಸಾರ. ಸಂಘಟಿತರಾಗಿ ಹೋರಾಟದ ಮೂಲಕ ಸವಲತ್ತುಗಳನ್ನು ಪಡೆಯಬೇಕಾದ ದುಸ್ಥಿತಿ ಇದೆ ಎಂದರು.

ಸರ್ಕಾರಗಳು ಸಹ ಮಾಜಿ ಸೈನಿಕರ ಶ್ರೇಯೋಭಿವೃದ್ಧಿಗೆ ತಾತ್ಸಾರ ವಹಿಸಿವೆ. ಸೈನಿಕ ಪದ ತೆಗೆದು ಹಾಕಿ ರಕ್ಷಣಾ ನೌಕರರೆಂದು ಕರೆದರೆ ಸಾಕು ಎನ್ನುವಂತಾಗಿದೆ. ಹುತಾತ್ಮ ಯೋಧರ ಕುಟುಂಬಕ್ಕೆ ಕನಿಷ್ಠ ಸವಲತ್ತುಗಳನ್ನು ನೀಡುವಲ್ಲಿ ಅಧಿಕಾರಿಗಳು, ರಾಜಕಾರಣಿಗಳು ನಿರ್ಲಕ್ಷೃ ತೋರುತ್ತಿದ್ದಾರೆ ಎಂದು ಕಣ್ಣೀರು ಹಾಕಿದರು.

ಹೂವಿನಹಡಗಲಿ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಸಂಘದ ಜಿಲ್ಲಾಧ್ಯಕ್ಷ ಜಿ.ಎಸ್.ಮಂಜುನಾಥ, ತಾಲೂಕು ಘಟಕದ ಅಧ್ಯಕ್ಷ ಎಂ.ರಾಮರೆಡ್ಡಿ, ಮಾಜಿ ಸೈನಿಕರಾದ ನೂರ್ ಅಹ್ಮದ್ ಕೇರೂರ್, ಎಚ್.ಎಸ್.ಮುಜಾವರ್, ಕೆ.ಎಂ.ಚನ್ನವೀರಸ್ವಾಮಿ ಇದ್ದರು.
ಇದಕ್ಕೂ ಮುನ್ನ ಪಟ್ಟಣದ ಹಳೇಊರಿನ ನೀರಾವರಿ ಆಂಜನೇಯ ದೇವಸ್ಥಾನದಿಂದ ಬಸವೇಶ್ವರ ವೃತ್ತ, ರಾಮನಗರ ವೃತ್ತ, ಕೂಡ್ಲಿಗಿ ರಸ್ತೆ ಮೂಲಕ ರಾಷ್ಟ್ರೋತ್ಥಾನ ವಿದ್ಯಾಕೇಂದ್ರವರೆಗೆ ಮಾಜಿ ಸೈನಿಕರು ಬೈಕ್ ರ‌್ಯಾಲಿಯಲ್ಲಿ ಆಗಮಿಸಿದರು.