ಹಗರಿಬೊಮ್ಮನಹಳ್ಳಿಯ ತಹಸಿಲ್ ಕಚೇರಿಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ತಹಸೀಲ್ದಾರ್ ಕೆ.ಶರಣಮ್ಮರಿಗೆ ಮನವಿ ಸಲ್ಲಿಸಿದರು. 
ಜಿಲ್ಲೆ

ಬೆಳೆ ನಷ್ಟ ಪರಿಹಾರದ ಸರ್ವೇಗೆ ಸಮಿತಿ ರಚಿಸುವಂತೆ ರೈತ ಸಂಘ ಮತ್ತು ಹಸಿರು ಸೇನೆ ಆಗ್ರಹ

ಹಗರಿಬೊಮ್ಮನಹಳ್ಳಿ: ಕರೊನಾ ಲಾಕ್‌ಡೌನ್ ವೇಳೆಯಲ್ಲಿ ರೈತರ ಬೆಳೆ ನಷ್ಟವನ್ನು ಸರ್ವೇ ಮಾಡಿ ಪರಿಹಾರ ಒದಗಿಸಲು ಸರ್ಕಾರ ಸಮಿತಿ ರಚಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ತಹಸೀಲ್ದಾರ ಕೆ.ಶರಣಮ್ಮರಿಗೆ ಗುರುವಾರ ಮನವಿ ಸಲ್ಲಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಗೋಣಿಬಸಪ್ಪ ಮಾತನಾಡಿ, ಕರೊನಾ ಮೊದಲನೇ ಮತ್ತು ಎರಡನೇ ಲಾಕ್‌ಡೌನ್‌ನಿಂದಾಗಿ ರೈತಾಪಿ ವರ್ಗ ತೀವ್ರ ಸಂಕಷ್ಟ ಅನುಭವಿಸಿದೆ. ಒಂದೆಡೆ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಹಣ್ಣು, ತರಕಾರಿ, ಹೂವಿನ ಬೆಳೆಗಳಿಗೆ ಸಮರ್ಪಕ ಮಾರುಕಟ್ಟೆ ಸಿಗದೆ ಬೆಳೆಯನ್ನು ಬೀದಿಗೆ ಬಿಸಾಡಿ ನಷ್ಟ ಅನುಭವಿಸಿದ್ದಾರೆ. ಮತ್ತೊಂದೆಡೆ ಮಾರುಕಟ್ಟೆ ಇದ್ದರೂ ಬೆಲೆ ಸಿಗದೇ ನಷ್ಟ ಕಂಡಿದ್ದಾರೆ. ರಾಜ್ಯ ಸರ್ಕಾರ ಕರೊನಾದಿಂದಾಗಿ ರೈತಾಪಿ ವರ್ಗದ ನಷ್ಟವನ್ನು ಸರ್ವೇ ಮಾಡಿಸಿ ಸೂಕ್ತ ಪರಿಹಾರ ಒದಗಿಸಲು ಶೀಘ್ರ ಸಮಿತಿಯನ್ನು ರಚಿಸಬೇಕು. ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಮೃತಪಟ್ಟ ಮತ್ತು ರಾಜ್ಯದಲ್ಲಿ ಕರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷರೂ ಪರಿಹಾರ ನೀಡಬೇಕು. ಗ್ರಾಮೀಣ ಭಾಗದಲ್ಲಿ ಕೋವಿಡ್ ಟೆಸ್ಟ್‌ನ್ನು ವ್ಯಾಪಕಗೊಳಿಸಬೇಕು. ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಬೇಕು. ಕೃಷಿ ಪರಿಕರಗಳ ಮೇಲೆ ವಿಧಿಸುವ ಜಿಎಸ್‌ಟಿ, ಎಸ್‌ಜಿಎಸ್‌ಟಿ ಸಂಪೂರ್ಣ ಕೈಬಿಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಅಧ್ಯಕ್ಷ ಬಿ.ಸಿದ್ದನಗೌಡ, ಮುಖಂಡರಾದ ಬಸವನಗೌಡ, ಹ್ಯಾಳದ ಚನ್ನಬಸಪ್ಪ, ಮೃತ್ಯುಂಜಯಗೌಡ, ಜೆ.ಎಂ.ರುದ್ರಮುನಿಸ್ವಾಮಿ, ಗುರುವಯ್ಯ, ಗಡ್ಡಿಚನ್ನಬಸವರಾಜ, ರಾಜಸಾಬ್ ಇತರಿದ್ದರು.