ಹಗರಿಬೊಮ್ಮನಹಳ್ಳಿ: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸುವುದು ಹಾಗೂ ಕಾಳಸಂತೆಯಲ್ಲಿ ರಸ ಗೊಬ್ಬರ ಮಾರಾಟ ತಡೆಗೆ ಆಗ್ರಹಿಸಿ ಪಟ್ಟಣದ ತಹಸಿಲ್ ಕಚೇರಿ ಮುಂದೆ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಕೊಟಗಿ ಮಲ್ಲಿಕಾರ್ಜುನ ಮಾತನಾಡಿ, ತಾಲೂಕಿನಲ್ಲಿ ಸಾವಿರಾರು ಕುಟುಂಬಗಳು ಸರ್ಕಾರಿ ಭೂಮಿಗಳಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರೆ. ಉಳುವವನೇ ಭೂಮಿ ಒಡೆಯ ಕಾಯ್ದೆ ಅನ್ವಯ ಫಾರ್ಮ್ ನಂ. 57ರಲ್ಲಿ ಭರ್ತಿ ಮಾಡಿ ಹಕ್ಕು ಪತ್ರಕ್ಕಾಗಿ ರೈತರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಸರ್ಕಾರ ಅರ್ಜಿಗಳ ಪರಿಶೀಲಿಸಿ ಪಟ್ಟಾ ನೀಡುವಲ್ಲಿ ವಿಳಂಬ ಮಾಡಿ ಬಡ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಮುಖಂಡ ವಿರೂಪಾಕ್ಷಪ್ಪ ಮಾತನಾಡಿ, ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ತಡೆಗೆ ಸರ್ಕಾರ ಕ್ರಮಕೈಗೊಳ್ಳಬೇಕು. ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಸಂಘದ ತಾಲೂಕು ಅಧ್ಯಕ್ಷ ಕೆ.ಗಾಳೆಪ್ಪ, ಕಾರ್ಯದರ್ಶಿ ಎಚ್.ಮಂಜುನಾಥ, ಸಂಚಾಲಕರಾದ ಆನಂದ, ಖಾಕಿ ಬಸವರಾಜ, ತಿಂದಪ್ಪ, ಮಾಬುಸಾಬ್ ಇತರರಿದ್ದರು.