ಹಗರಿಬೊಮ್ಮನಹಳ್ಳಿ: ಪಟ್ಟಣದ ಕನ್ಯಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಜು.27ರಂದು ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾ ಮತ್ತು ವಾಸವಿ ಯುವಜನ ಸಂಘದಿಂದ ವಿಜಯನಗರ ವಿಭಾಗೀಯ 3ನೇ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಯುವಜನ ಮಹಾಸಭಾದ ರಾಜ್ಯ ಕಾರ್ಯದರ್ಶಿ ಜಿ.ವಿ.ಭರತ್ ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಮೂರು ಜಿಲ್ಲೆಗಳ ವಿಭಾಗೀಯ ಸಮ್ಮೇಳನ ಇದಾಗಿದ್ದು, 74 ಆರ್ಯವೈಶ್ಯ ಯುವಜನ ಸಂಘಗಳು ಪಾಲ್ಗೊಳ್ಳಲಿವೆ.ಎರಡು ಸಾವಿರ ಜನ ವ್ಯಕ್ತಿತ್ವ ವಿಕಸನ ಶಿಬಿರಾರ್ಥಿಗಳಾಗಿ ಭಾಗವಹಿಸುವರು. ಯುವಜನ ಮಹಾಸಭಾ ರಾಜ್ಯಾಧ್ಯಕ್ಷ ಎಸ್.ಸುನೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ವಾಸವಿ ಪೀಠದ ಸಚ್ಚಿದಾನಂದ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್, ಶಾಸಕ ಕೆ.ನೇಮಿರಾಜ್ ನಾಯ್ಕ, ಮಾತಾ ಮಂಜಮ್ಮ ಜೋಗತಿ ಇತರರು ಭಾಗವಹಿಸಲಿದ್ದಾರೆ. ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಆರ್ಯವೈಶ್ಯ ಸಂಘ ಟ್ರಸ್ಟ್ ಅಧ್ಯಕ್ಷ ಜಿ.ಲಕ್ಷ್ಮೀಪತಿ, ಕಾರ್ಯದರ್ಶಿ ಕೆ.ವೆಂಕಟಚಲಪತಿ, ವಾಸವಿ ಯುವಜನ ಸಂಘದ ಅಧ್ಯಕ್ಷ ಪ್ರವೀಣ್ ಬೇಳೂರು, ಧರ್ಮಕರ್ತ ಮಾರುತಿ ಬೇಳೂರು, ಡಿ.ಗೋಪಾಲ ಶೆಟ್ಟಿ, ಬಂಡ್ರಿ ರಾಘವೇಂದ್ರ ಹಾಗೂ ಕೆ.ಲಕ್ಷಮೀಪತಿ ಇದ್ದರು.