ಜಿಲ್ಲೆ

ಕೃಷಿಕರಿಗೆ ಮಾರಕವಾದ ನಿರ್ಧಾರ ಹಿಂಪಡೆಯಲು ರಾಜ್ಯ ರೈತ ಸಂಘ ಒತ್ತಾಯ

ಹಗರಿಬೊಮ್ಮನಹಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ರಾಜ್ಯ ರೈತ ಸಂಘ ನೇತೃತ್ವದಲ್ಲಿ ರೈತರು ಪಟ್ಟಣದ ಜೆಸ್ಕಾಂ ಉಪವಿಭಾಗೀಯ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಸಂಘದ ರಾಜ್ಯ ಕಾರ್ಯದರ್ಶಿ ಬಿ.ಗೋಣಿಬಸಪ್ಪ ಮಾತನಾಡಿ, ರೈತ ಪರವಾಗಿ ಕೆಲಸ ಮಾಡಬೇಕಿರುವ ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ಪಾಲಿಸುತ್ತಿವೆ. ಬಡ ರೈತರ ಕೃಷಿಗೆ ಆದ್ಯತೆ ನೀಡುವುದು ಬಿಟ್ಟು ರೈತರ ಜಮೀನಿನಲ್ಲಿರುವ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಮುಂದಾಗಿರುವುದು ಖಂಡನೀಯ. ರೈತರ ಸಮಸ್ಯೆಗಳ ಕುರಿತು ರಾಜ್ಯಾದ್ಯಂತ ಕೈಗೊಂಡಿರುವ ಧರಣಿ ಹಮ್ಮಿಕೊಳ್ಳಲಾಗಿದೆ. ಉಭಯ ಸರ್ಕಾರಗಳು ರೈತ ವಿರೋಧಿ ನೀತಿಯನ್ನು ಕೈಬಿಡಬೇಕು. ಕೃಷಿಕರಿಗೆ ಮಾರಕವಾದ ನಿರ್ಧಾರಗಳನ್ನು ಹಿಂಪಡೆಯಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು 10 ಗಂಟೆ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.

ಈಲ್ಲಾಧ್ಯಕ್ಷ ಬಿ.ಸಿದ್ದನಗೌಡ ಮಾತನಾಡಿ, ತಾಲೂಕಿನ ಅತೀ ಹೆಚ್ಚು ರೈತರು ಪಂಪ್‌ಸೆಟ್ ಮೇಲೆ ಅವಲಂಬಿತರಾಗಿದ್ದಾರೆ. ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಅಂರ್ತಜಲ ಮಟ್ಟ ಹೆಚ್ಚಾಗಿದೆ. ಆದರೆ, ಸಾಮರ್ಥ್ಯಕ್ಕೆ ತಕ್ಕಷ್ಟು ವಿದ್ಯುತ್ ಪೂರೈಕೆ ನೀಡದೆ ಕೊರತೆಯಾಗಿದೆ. ಸರ್ಕಾರ ಪರಿಶೀಲಿಸಿ ಅಕ್ರಮ, ಸಕ್ರಮ ಯೋಜನೆಯಡಿ ಟಿಸಿ ಮತ್ತಿತರ ಸಾಮಗ್ರಿಗಳನ್ನು ನೀಡುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಘಟಕದ ಅಧ್ಯಕ್ಷ ಹರಟೆ ಕಾಳಪ್ಪ, ಹಸಿರು ಸೇನೆಯ ಮೆಹಬೂಬ್ ಸಾಬ್, ಪ್ರಮುಖರಾದ ಎಚ್.ನಾಗರಾಜ್, ಎನ್.ವೀರಣ್ಣ, ಎಚ್.ಶಂಕ್ರಪ್ಪ, ಕೆ.ಶಿವಣ್ಣ, ರವಿಕುಮಾರ ತಂಬ್ರಹಳ್ಳಿ, ಎಚ್.ಮಹೇಶ್, ವಿ.ನಾಗೇಂದ್ರಪ್ಪ, ಕೆ.ಕೆ.ಬಿ.ಎಂ.ಗುರುಬಸವರಾಜ್, ರಹಿಮಾನ್‌ಸಾಬ್, ಶಿವರಾಜ್, ಜಿ.ಶಿಕುಮಾರ್, ಆರ್.ಬಿ.ಶಾಂತಕುಮಾರ್, ಎ.ಜಿ.ಶಾಂತರಾಜ್, ಮುದುಕಪ್ಪ ಇತರರಿದ್ದರು.