ಹಗರಿಬೊಮ್ಮನಹಳ್ಳಿ: ಪಟ್ಟಣದ ಚಿಂತ್ರಪಳ್ಳಿ ಮಾರ್ಗದಲ್ಲಿ ಕೊಳೆಗೇರಿ ಪ್ರದೇಶದಲ್ಲಿ ಟೆಂಟ್ ಹಾಕಿಕೊಂಡು ಜೀವನ ನಡೆಸುತ್ತಿರುವ ಅಲೆಮಾರಿ ಸಿಂಧೋಳ್ ಸಮುದಾಯದವರಿಗೆ ಮಂಗಳವಾರದಿಂದ ಆಧಾರ್ರ್ ಕಾರ್ಡ್ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಕಳೆದ ತಿಂಗಳು ಎಸ್ಸಿ, ಎಸ್ಟಿ ಅಲೆಮಾರಿ ಸಮುದಾಯಗಳ ನಿಗಮದ ರಾಜ್ಯಾಧ್ಯಕ್ಷೆ ಜಿ.ಪಲ್ಲವಿ ಸ್ಥಳಕ್ಕೆ ಭೇಟಿ ನೀಡಿದಾಗ ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ ಹಾಗೂ ಸೌಲಭ್ಯಗಳಿಲ್ಲದಿರುವ ಬಗ್ಗೆ ಸ್ಥಳೀಯ ನಿವಾಸಿಗಳು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷೆ ಜಿ.ಪಲ್ಲವಿ ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದ್ದರು. ಜಿಲ್ಲಾಡಳಿತದ ಸೂಚನೆಯಂತೆ ಸಿಂಧೋಳ್ ಸಮುದಾಯದವರು ವಾಸಿಸುವ ಸ್ಥಳಕ್ಕೆ ಭೇಟಿ ನೀಡಿ ಆಧಾರ್ ಕಾರ್ಡ್ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಮೂರನೇ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಬಿ.ಶೈಲಶ್ರೀ ಬಸವರಾಜ ಮಾಹಿತಿ ನೀಡಿ, ಸ್ಥಳೀಯರಿಗೆ ಒಂದು ವಾರದೊಳಗೆ ಆಧಾರ್‌ಕಾರ್ಡ್ ನೋಂದಣಿ ಮಾಡಲಾಗುವುದು ಎಂದರು. ಸಮುದಾಯದ ಪ್ರಮುಖ ನರಸಿಂಹಪ್ಪ ಮಾತನಾಡಿ, ಒಟ್ಟು 71 ಜನರಿಗೆ ಆಧಾರ್ ಕಾರ್ಡ್ ಬೇಕು. ಜಾತಿ ಪ್ರಮಾಣಪತ್ರ ನೀಡಲು ಕೂಡ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.