ಜಿಲ್ಲೆ

ಕಚ್ಚಾ ತೈಲದ ಮೇಲಿನ ಅವಲಂಬನೆ ತಗ್ಗಲಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ತೂಬಗೆರೆ
ವಿಶ್ವದಲ್ಲಿ ಅತಿ ಹೆಚ್ಚು ಕಚ್ಚಾತೈಲ ಬಳಸುತ್ತಿರುವ ದೇಶಗಳ ಪೈಕಿ ಭಾರತ 5ನೇ ಸ್ಥಾನದಲ್ಲಿದೆ. ಪ್ರತಿ ವರ್ಷ 38 ದಶಲಕ್ಷ ಟನ್ ತೈಲೋತ್ಪನ್ನ ಹೊರತೆಗೆಯಲಾಗುತ್ತಿದ್ದು, ತೈಲೋತ್ಪದ ಮೇಲೆ ಅವಲಂಬನೆ ಹೆಚ್ಚಾದರೆ 20 ವರ್ಷಗಳಲ್ಲಿ ತೈಲ ನಿಕ್ಷೇಪ ಖಾಲಿಯಾಗುವ ಸಂಭವವಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಜೆ.ವೆಂಕಟೇಗೌಡ ಹೇಳಿದರು.
ಹೋಬಳಿಯ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ ಹಾಗೂ ದೊಡ್ಡಬಳ್ಳಾಪುರ ಪ್ರಾದೇಶಿಕ ಅರಣ್ಯ ವಲಯದಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಯಲ್ಲಿ ಮಾತನಾಡಿದರು. ಸಸ್ಯಜನ್ಯದಿಂದ ಇಂಧನ ಅಭಿವೃದ್ಧಿ ಪಡಿಸಿ, ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ಮತ್ತು ಕೃಷಿ ವಲಯದ ಮೂಲಕ ಇಂಧನದ ಭದ್ರತೆ ಬಲಪಡಿಸಲು ಕ್ರಮ ಕೈಗೊಳ್ಳಬೇಕು ಎಂದರು.
ದೇಶ ಶೇ.85 ತೈಲವನ್ನು ಕೊಲ್ಲಿ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲು ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ. ಇದನ್ನು ತಪ್ಪಿಸುವ ಜತೆಗೆ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಗಳಾಗಲು ನಮ್ಮಲ್ಲೇ ದೊರಕುವ ಜೈವಿಕ ಇಂಧನಗಳ ಸದ್ಬಳಕೆ ಮಾಡಬೇಕು ಎಂದು ತಿಳಿಸಿದರು.
ದೊಡ್ಡಬಳ್ಳಾಪುರ ಸಾಮಾಜಿಕ ಅರಣ್ಯ ವಲಯದ ಅಧಿಕಾರಿ ರಾಜಶೇಖರ್ ಮಾತನಾಡಿ, ಜೈವಿಕ ಇಂಧನ ಸಸ್ಯಗಳಾದ ಹೊಂಗೆ, ಬೇವು, ಹಿಪ್ಪೆ, ಸಿಮಾರುಬಾ, ಜಟ್ರೋಫಾ, ಸರಹೊನ್ನೆ ಗಿಡಗಳನ್ನು ಬೆಳೆಸುವ ಮುಖಾಂತರ ಜೈವಿಕ ಇಂಧನವನ್ನು ಭವಿಷ್ಯದ ಇಂಧನವಾಗಿ ಮಾಡಬೇಕು. ಕೃಷಿ ವಿಜ್ಞಾನ ಕೇಂದ್ರದ 4 ಎಕರೆ ಕ್ಷೇತ್ರದಲ್ಲಿ ಜೈವಿಕ ಇಂಧನ ಸಸಿಗಳನ್ನು ಅರಣ್ಯ ಇಲಾಖೆಯಿಂದ ನೆಡಲಾಗುವುದು ಎಂದು ತಿಳಿಸಿದರು.
ಪೆಟ್ರೋಲಿಯಂ ಲಭ್ಯತೆ ಹಾಗೂ ಪಾರ್ಯಾಯ ಇಂಧನ ವೃದ್ಧಿಯಾಗಬೇಕಾದರೆ, ಪ್ರತಿಯೊಬ್ಬರೂ ಕನಿಷ್ಠ ನಾಲ್ಕು ಗಿಡಗಳನ್ನು ನೆಟ್ಟು, ಬೆಳೆಸಬೇಕು ಎಂದು ಕೃಷಿ ಕೇಂದ್ರದ ಮುಖ್ಯಸ್ಥ ಡಾ.ಬಿ.ಜಿ.ಹನುಮಂತರಾಯ ತಿಳಿಹೇಳಿದರು.