ತರೀಕೆರೆ: ತಾಲೂಕಿನ ಹಾದಿಕೆರೆ ಗ್ರಾಮದ ಸರ್ವೆ ನಂ. 187ರ ಅರಣ್ಯ ಒತ್ತುವರಿಗೆ ಸಂಬಂಧಿಸಿ ಗುರುವಾರ 6 ಮಂದಿ ಒತ್ತುವರಿದಾರರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದರು.
ಗುರುವಾರ ಬೆಳಗ್ಗೆ ಅರಣ್ಯ ಭೂಮಿಗೆ ಅತಿಕ್ರಮ ಪ್ರವೇಶ ಮಾಡಿದ ಒತ್ತುವರಿದಾರರು ಅರಣ್ಯ ಪ್ರದೇಶದಲ್ಲಿದ್ದ ನೀಲಗಿರಿ ಮತ್ತಿತರ ಜಾತಿಯ ಗಿಡ, ಮರಗಳನ್ನು ಏಕಾಏಕಿ ಕಟಾವು ಮಾಡಿದ್ದಾರೆ. ಮಾಹಿತಿ ಮೇರೆಗೆ ಅಲ್ಲಿಗೆ ಆಗಮಿಸಿದ ಅರಣ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ತಡೆಯುವ ಪ್ರಯತ್ನ ನಡೆಸಿದರೂ ಜಗ್ಗದ ಒತ್ತುವರಿದಾರರು ಉಭಯ ಇಲಾಖೆ ಸಿಬ್ಬಂದಿ ಜತೆ ವಾಗ್ವಾದಕ್ಕಿಳಿದಿದ್ದಾರೆ.
ಪರಿಸ್ಥಿತಿ ಬಿಗಡಾಯಿಸುವ ಹಂತ ತಲುಪಿದ್ದರಿಂದ ಒತ್ತುವರಿದಾರರ ಪೈಕಿ ಕೃಷ್ಣಪ್ಪ (65) ಸೋಮಶೇಖರ್ (40) ಕಾಂತರಾಜು (33) ಸುದೀಪ್ (27) ರವಿ (33) ಮತ್ತು ಬಿ.ಪಿ.ಹರೀಶ್ ಚಂದ್ರಪಾಲ್ (22) ಎಂಬುವರನ್ನು ವಶಕ್ಕೆ ಪಡೆದ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಪಟ್ಟಣದ ಅರಣ್ಯ ಇಲಾಖೆ ಕಚೇರಿಗೆ ಕರೆತಂದರು.
ಅರಣ್ಯ ಪ್ರದೇಶ ಅತಿಕ್ರಮ ಪ್ರವೇಶ ಮಾಡಿ ಒತ್ತುವರಿ ಮಾಡಿದ ಆರೋಪದಡಿ ಬಂಧಿತ 6 ಮಂದಿ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಭೂ ಒತ್ತುವರಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುವ ಸಾಧ್ಯತೆ ಇದೆ.
ಅರಣ್ಯ ಪ್ರದೇಶವೆಂದು ಹೇಳಲಾಗುತ್ತಿರುವ ಹಾದಿಕೆರೆ ಗ್ರಾಮದ ಸರ್ವೆ ನಂ.187ರ ಜಾಗವನ್ನು ಸರ್ಕಾರ 1964ರಲ್ಲಿ ಕಂದಾಯ ಇಲಾಖೆಗೆ ವರ್ಗಾವಣೆ ಮಾಡಿದೆ. 47 ಬಗರ್ಹುಕುಂ ಸಾಗುವಳಿದಾರರು ಫಾಮ್ರ್ ನಂ. 56 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್ ಕೂಡ ಸ್ವಾಧೀನಾನುಭವದಂತೆ ಅರ್ಜಿ ಇತ್ಯರ್ಥಪಡಿಸಲು ಕಂದಾಯ ಮತ್ತು ಅರಣ್ಯ ಇಲಾಖೆಗೆ ಆದೇಶಿಸಿದೆ. ಆದರೆ ಅರಣ್ಯ ಇಲಾಖೆ ವಿನಾಕಾರಣ ಕಿರುಕುಳ ನೀಡಿ ಸ್ವಾಧೀನಾನುಭವ ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಗುರುವಾರ ಸಾಗುವಳಿ ಮಾಡಲು ಹೊರಟ್ಟಿದ್ದ ರೈತರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದಾರೆ. ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂಬುದು ಬಗರ್ಹುಕುಂ ಸಾಗುವಳಿದಾರರಾದ ಮಾಲತಿ ಆರೋಪ.
ಸ್ಥಳಕ್ಕೆ ಆರ್ಎಫ್ಒ ಕೆ.ಆರ್.ರಾಜೇಶ್, ಡಿಆರ್ಎಫ್ಒ ಪ್ರದೀಪ್, ಮುನ್ನಾವರ್, ಪ್ರಕಾಶ್, ದಿನೇಶ್, ಧರ್ವನಾಯ್ಕ ಇತರರಿದ್ದರು.