ಹೂವಿನಹಡಗಲಿಯಲ್ಲಿ ಮಂಗಳವಾರ ದೇವದಾಸಿ ಮಹಿಳೆಯರ ಕ್ಷೇಮಾಭಿವೃದ್ಧಿ ಒಕ್ಕೂಟ ಪ್ರತಿಭಟನೆ ನಡೆಸಿತು. ಜಿಲ್ಲಾಧ್ಯಕ್ಷೆ ರೇಣುಕಮ್ಮ, ತಾಲೂಕು ಅಧ್ಯಕ್ಷೆ ಎಚ್.ದಂಡೆಮ್ಮ, ಸಿಪಿಐ ಕಾರ್ಯದರ್ಶಿಗಳಾದ ಹಲಗಿ ಸುರೇಶ, ಗುಡಿಹಳ್ಳಿ ಹಾಲೇಶ್ ಇತರರಿದ್ದರು. 
ಜಿಲ್ಲೆ

ಸರ್ಕಾರ ಸಹಾಯಧನ ಮೊತ್ತ ಹೆಚ್ಚಿಸಲಿ

ನರೇಶ್ ಕುಮಾರ್

ಹೂವಿನಹಡಗಲಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ಶಾಸ್ತ್ರೀ ವೃತ್ತದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಕ್ಷೇಮಾಭಿವೃದ್ಧಿ ಒಕ್ಕೂಟ ಹಾಗೂ ಇತರ ಸಂಘಟನೆಗಳಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ತಾಲೂಕು ಅಧ್ಯಕ್ಷೆ ಎಚ್.ದಂಡೆಮ್ಮ ಮಾತನಾಡಿ, ವಿಮುಕ್ತ ದೇವದಾಸಿಯರಿಗೆ ಪ್ರತಿ ತಿಂಗಳು 10ನೇ ತಾರೀಖುನೊಳಗೆ ಮಾಸಾಶನ ಬಿಡುಗಡೆ ಮಾಡಬೇಕು. ಮೂರು ಎಕರೆ ಜಮೀನು ನೀಡುವ ಪ್ರಕ್ರಿಯೆಯನ್ನು ಸರ್ಕಾರ ತ್ವರಿತವಾಗಿ ಆರಂಭಿಸಬೇಕು.

ಮಹಿಳೆಯರಿಗೆ ಸರ್ಕಾರದಿಂದ ದೊರಕುತ್ತಿರುವ ಸೌಲಭ್ಯಗಳು ಎಲ್ಲರಿಗೂ ಕಲ್ಪಿಸಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರವಿದ್ದಾಗ 1 ಲಕ್ಷ ರೂ. ಸಹಾಯಧನ ನೀಡುತ್ತಿತ್ತು. ಅದನ್ನು ಬಿಜೆಪಿ ಸರ್ಕಾರ 35 ಸಾವಿರ ರೂ.ಗೆ ಇಳಿಸಿತ್ತು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಮೊದಲಿನಂತೆ ಸಹಾಯಧನ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಿಪಿಐ ತಾಲೂಕು ಕಾರ್ಯದರ್ಶಿ ಹಲಗಿ ಸುರೇಶ ಮಾತನಾಡಿ, ವಿಮುಕ್ತ ದೇವದಾಸಿಯರ ಮಕ್ಕಳಿಗೆ 5 ಲಕ್ಷ ರೂ. ಸಹಾಯಧನ ನೀಡಬೇಕು. ಆಧಾರ್ ಕಾರ್ಡ್‌ನ ಪ್ರಕಾರ ವ್ಯತ್ಯಾಸ ಕಂಡು ಬಂದಲ್ಲಿ ಕೂಡಲೇ ಅಧಿಕಾರಿಗಳಿಂದ ತನಿಖೆ ನಡೆಸಿ ಅವರಿಗೆ ಸೌಲಭ್ಯ ದೊರಕುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಹರಪನಹಳ್ಳಿ ತಾಲೂಕು ಸಿಪಿಐ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಸಮೀಕ್ಷೆ ಪಟ್ಟಿಯಿಂದ ಹೊರಗುಳಿದ ವಿಮುಕ್ತ ದೇವದಾಸಿಯರನ್ನು ಕೂಡಲೇ ಸರ್ವೇ ಮಾಡಿ ಸೇರಿಸಬೇಕು ಎಂದರು. ಜಿಲ್ಲಾಧ್ಯಕ್ಷೆ ರೇಣುಕಮ್ಮ, ಎಐವೈಎಫ್ ತಾಲೂಕು ಸಂಚಾಲಕ ಬಸವರಾಜ ಸಂಶಿ, ಎಐಕೆಎಸ್ ತಾಲೂಕು ಅಧ್ಯಕ್ಷ ಡಿ.ಮುಕ್ಕುಂದಗೌಡ, ಸದಸ್ಯರಾದ ಫಾತೀಮಾ, ಗಾಳಮ್ಮ, ಫಕ್ಕೀರಮ್ಮ, ಅಕ್ಕಮ್ಮ, ಹೊನ್ನಮ್ಮ ಇತರರಿದ್ದರು.