ಜಿಲ್ಲೆ

ದಾವೋಸ್​ನಿಂದ ಹಿಂದಿರುಗಿದ ಬಳಿಕ ಸಂಪುಟ ವಿಸ್ತರಣೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ

ಬೆಂಗಳೂರು: ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಜತೆಗೆ ಸಂಪುಟ ವಿಸ್ತರಣೆ ಕುರಿತು ಸುದೀರ್ಘ ಚರ್ಚೆ ನಡೆಸಿದ್ದು, ದಾವೋಸ್ ಪ್ರವಾಸದಿಂದ ಹಿಂದಿರುಗಿದ ಬಳಿಕ ಕ್ಯಾಬಿನೆಟ್ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.

ವರ್ಲ್ಡ್ ಎಕನಾಮಿಕ್ ಫೋರಂನ ಶೃಂಗದಲ್ಲಿ ಭಾಗವಹಿಸಲು ದಾವೋಸ್​ಗೆ ತೆರಳುವ ಮೊದಲು ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕ್ಯಾಬಿನೆಟ್ ವಿಸ್ತರಣೆ ಕುರಿತು ಶನಿವಾರ ಒಂದೂವರೆ ಗಂಟೆ ಕಾಲ ಅಮಿತ್ ಷಾ ಅವರ ಜತೆಗೆ ಮಾತುಕತೆ ನಡೆಸಿದ್ದೇನೆ. ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ದಾವೋಸ್ ಪ್ರವಾಸ ಮುಗಿಸಿ ಬಂದ ನಂತರದಲ್ಲಿ ಒಂದು ಅಥವಾ ಎರಡು ದಿನಗಳಲ್ಲಿ ನಾನು ಸಚಿವ ಸಂಪುಟ ವಿಸ್ತರಣೆ ಘೋಷಿಸುತ್ತೇನೆ. ಇದಕ್ಕೆ ಯಾವುದೇ ಅಡ್ಡಿ ಆತಂಕ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸ್ಪಷ್ಟತೆ ಇಲ್ಲ ಎಂಬ ಮಾಧ್ಯಮ ವರದಿಯನ್ನು ತಳ್ಳಿ ಹಾಕಿದ ಅವರು,ಅಂತಹ ಯಾವುದೇ ಗೊಂದಲ ಇಲ್ಲ ಎಂದರು.

ಮುಖ್ಯಮಂತ್ರಿಗಳ ಪ್ರವಾಸ ಕಾರ್ಯಕ್ರಮದ ಪಟ್ಟಿ ಪ್ರಕಾರ ಅವರು ಬೆಂಗಳೂರಿಗೆ ಜನವರಿ 24ರಂದು ಹಿಂದಿರುಗಲಿದ್ದಾರೆ. ದಾವೋಸ್​ಗೆ ಹೋಗುತ್ತಿರುವ ಮುಖ್ಯಮಂತ್ರಿಗಳ ಪೈಕಿ ಪಂಜಾಬ್​ನ ಅಮರೀಂದರ್ ಸಿಂಗ್​, ಮಧ್ಯಪ್ರದೇಶದ ಕಮಲನಾಥ್ ಇದ್ದಾರೆ. ಇವರಲ್ಲದೆ, ಕೇಂದ್ರ ಸಚಿವರಾದ ಪಿಯೂಷ್ ಗೋಯೆಲ್, ಮಾನ್ಸುಕ್ ಮಾಂಡವ್ಯ ಕೂಡ ದಾವೋಸ್ ಹೋಗುತ್ತಿದ್ದಾರೆ. (ಏಜೆನ್ಸೀಸ್)