ಗಂಗಾವತಿ ಶಿವೆ ಚಿತ್ರಮಂದಿರದಲ್ಲಿ ಮುಂದಿನ ವಾರ ಬಿಡುಗಡೆಗೊಳ್ಳಲಿರುವ ಡೈಮಂಡ್ ಕ್ರಾಸ್ ಪ್ರಮೋಶನ್ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದರನ್ನು ಸ್ಥಳೀಯ ಉದ್ಯಮಿದಾರರು ಸನ್ಮಾನಿಸಿದರು. ನಗರಸಭೆ ಸದಸ್ಯ ಮನೋಹರಸ್ವಾಮಿ ಹಿರೇಮಠ, ನಿರ್ಮಾಪಕ ಮನೀಶ್ ಮೆಹ್ತಾ, ಹಾಸ್ಯನಟ ಮಿತ್ರ ಇತರರಿದ್ದರು. 
ಜಿಲ್ಲೆ

ಮುಂದಿನ ವಾರ ಬೆಳ್ಳಿ ತೆರೆಗೆ ಅಪರೂಪದ ಆ್ಯಕ್ಷನ್ ಚಿತ್ರ ಡೈಮಂಡ್ ಕ್ರಾಸ್

Gangavati - Mohan Kumar H R

ಗಂಗಾವತಿ: ಹ್ಯಾಕರ್ಸ್‌ಗಳಿಂದ ಸೃಷ್ಟಿಯಾಗುವ ಸೈಬರ್ ಕ್ರೈಂ ಕಥಾ ವಸ್ತುವನ್ನಾಗಿಟ್ಟುಕೊಂಡು ಕಡಿಮೆ ಬಜೆಟ್‌ನಲ್ಲಿ ಡೈಮಂಡ್ ಕ್ರಾಸ್ ಸಿನಿಮಾ ನಿರ್ಮಿಸಲಾಗಿದೆ ಎಂದು ನಿರ್ಮಾಪಕ ಹಾಗೂ ಗಂಗಾವತಿಯ ಉದ್ಯಮಿ ಮನೀಶ್ ಮೆಹ್ತಾ ಹೇಳಿದರು.

ನಗರದ ಶಿವೆ ಚಿತ್ರಮಂದಿರದಲ್ಲಿ ಮುಂದಿನ ವಾರ ಬಿಡುಗಡೆಗೊಳ್ಳಲಿರುವ ಡೈಮಂಡ್ ಕ್ರಾಸ್ ಪ್ರಮೋಶನ್ ನಿಮಿತ್ತ ಸೋಮವಾರ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, 3 ಕೋಟಿ ರೂ.ಬಜೆಟ್‌ನಲ್ಲಿ ಚಿತ್ರ ನಿರ್ಮಿಸಿದ್ದು, ಯಾವುದೇ ಹಾಡುಗಳಿಲ್ಲದ ಅಪರೂಪದ ಆ್ಯಕ್ಷನ್ ಚಿತ್ರ ಎಂದರು.

ಹಾಸ್ಯನಟ ಮತ್ತು ಸಹ ನಿರ್ಮಾಪಕ ಮಿತ್ರ ಮಾತನಾಡಿ, ಉತ್ತರ ಕರ್ನಾಟಕ ಕಲಾವಿದರನ್ನೊಳಗೊಂಡ ಡೈಮಂಡ್ ಕ್ರಾಸ್ ಚಿತ್ರ ರಾಜ್ಯದ 85 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುತ್ತಿದೆ. ಚಿತ್ರದಲ್ಲಿ ಒಂದೇ ಮಹಿಳಾ ಪಾತ್ರವಿದೆ. ಸಾಹಿತಿ ಹಾಗೂ ಹಿರಿಯ ಚಿತ್ರ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಚಿತ್ರ ನಿರ್ಮಿಸಿದ್ದು, ಬೆಂಗಳೂರು, ಶಿವಮೊಗ್ಗ, ಮೈಸೂರು ಭಾಗದಲ್ಲಿ ಬಹುತೇಕ ಚಿತ್ರೀಕರಣಗೊಂಡಿದೆ ಎಂದರು.

ಸ್ಥಳೀಯ ಉದ್ಯಮಿದಾರರು ಕಲಾವಿದರನ್ನು ಸನ್ಮಾನಿಸಿದರು. ನಾಯಕ ರಜತ್ ಅಣ್ಣಪ್ಪ, ನಾಯಕಿ ರೂಪಿಕಾ, ನಗರಸಭೆ ಸದಸ್ಯ ಮನೋಹರ ಸ್ವಾಮಿ ಹಿರೇಮಠ, ಟಾಕೀಸ್ ಮಾಲೀಕ ಎಸ್.ಶಿವರಾಜಗೌಡ ಇತರರಿದ್ದರು.