ಜಿಲ್ಲೆ

ಯತೀಂದ್ರ ವರ್ಗಾವಣೆ ದಂಧೆಯಿಂದ ಅಧಿಕಾರಿಗಳನ್ನು ಪ್ರಶ್ನಿಸುವ ನೈತಿಕತೆ ಕಳೆದುಕೊಂಡ ಸಿದ್ದರಾಮಯ್ಯ : ಎಚ್. ವಿಶ್ವನಾಥ್ ಟೀಕೆ

ಸದೇಶ್ ಕಾರ್ಮಾಡ್

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಹಾಗೂ ಆತನ ಸ್ನೇಹಿತರು ವರ್ಗಾವಣೆ ದಂಧೆಯಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳ ಕುರಿತು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಲು ಆಗುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಟೀಕಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮೈಸೂರಿನಲ್ಲೂ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಮೈಸೂರಿಗೆ ಎಸಿಪಿ ಆಗಿ ಬರಬೇಕಾದರೆ 1 ಕೋಟಿ ನೀಡಬೇಕು. ಅದೇ ರೀತಿ ಇನ್ಸ್‌ಪೆಕ್ಟರ್ ಹುದ್ದೆಗೆ 75 ಲಕ್ಷ, ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ 50 ಲಕ್ಷ ರೂ.ಗಳನ್ನು ನಿಗದಿ ಮಾಡಲಾಗಿದೆ. ಇದರ ಪರಿಣಾಮ ಆಡಳಿತ ಯಂತ್ರ, ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅಧಿಕಾರಿಗಳನ್ನು ಪ್ರಶ್ನಿಸುವ ನೈತಿಕತೆ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಸಿಕ್ಕ ಸಿಕ್ಕ ಕಡೆ ಅತ್ಯಾಚಾರ ನಡೆಯುತ್ತಿದೆ. ಮಕ್ಕಳನ್ನು ಹೊತ್ತುಕೊಂಡು ಹೋಗುವ ಘಟನೆ ನಡೆಯುತ್ತಿದೆ. ಲಂಚ ನೀಡಿ ಮೈಸೂರಿಗೆ ಬರುವ ಪೊಲೀಸ್ ಅಧಿಕಾರಿಗಳು ಲಂಚ ನೀಡಿದ ಹಣವನ್ನು ಕಳ್ಳರಿಂದಲೇ ವಸೂಲಿ ಮಾಡಬೇಕು. ಹೀಗಾದರೆ ಕಾನೂನು ಸುವಸ್ಥೆ ಉತ್ತಮಗೊಳ್ಳಲು ಹೇಗೆ ಸಾಧ್ಯ? ಡಾ.ಎಚ್.ಸಿ. ಮಹದೇವಪ್ಪ ಹೆಸರಿಗೆ ಮಾತ್ರ ಜಿಲ್ಲಾ ಉಸ್ತುವಾರಿ ಸಚಿವ. ಎಲ್ಲ ಆಡಳಿತವನ್ನು ಯತೀಂದ್ರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಶಾಲಾ ಶಿಕ್ಷಣ ಅಧೋಗತಿಗೆ ಹೋಗಿದೆ. ಶಿಕ್ಷಣದ ಬಗ್ಗೆ ಸಿದ್ದರಾಮಯ್ಯ ಬಹಳಷ್ಟು ಮಾತನಾಡುತ್ತಾರೆ. ಅವರು ಮಾತನಾಡವುದಕ್ಕೂ ವಾಸ್ತವಕ್ಕೂ ವ್ಯತ್ಯಾಸವಿದೆ. ಶಾಲೆಗಳಲ್ಲಿ ಮಕ್ಕಳಿಗೆ ಊಟ ಪಾಠ ಎರಡೂ ಸಿಗುತ್ತಿಲ್ಲ. ಹಸಿವಿನಿಂದ ಮಕ್ಕಳು ಮಲಗುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಲು 33 ಅಂಕ ಪಡೆದರೆ ಸಾಕು ಎಂಬ ನಿಯಮ ಸರಿಯಲ್ಲ. ಇದರಿಂದ ಶಾಲಾ ಶಿಕ್ಷಣದ ವ್ಯವಸ್ಥೆ ಹಾಳಾಗಲಿದೆ. ಕಡಿಮೆ ಅಂಕ ಪಡೆದರೂ ಪಾಸಾಗಬಹುದು ಎಂಬ ಮನೋಭಾವದಿಂದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಕುಂಠಿತವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಯನ್ನು ನಿರ್ಬಂಧಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿರುವು ದು ಸರಿಯಲ್ಲ. ಆರ್‌ಎಸ್‌ಎಸ್‌ನಿಂದ ರಾಜ್ಯದಲ್ಲಿ ಯಾವ ಅನಾಹುತ ಆಗಿದೆ ಹೇಳಿ? ಹಾಗಾದರೆ ಯೂತ್ ಕಾಂಗ್ರೆಸ್ ಚೆನ್ನಾಗಿದೆಯೇ? ಅಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆಯೇ? ನಿಮ್ಮಪ್ಪನಂತೆ ಒಳ್ಳೆಯ ಕೆಲಸ ಮಾಡು ಎಂದು ಜನ ನಿನ್ನನ್ನು ಗೆಲ್ಲಿಸಿದ್ದಾರೆ. ಆದರೆ ನೀನು ಕೆಲಸಕ್ಕೆ ಬಾರದ ವಿಚಾರ ಮಾತನಾಡಿಕೊಂಡು ರಾಷ್ಟ್ರೀಯ ನಾಯಕ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದೀಯ. ಪ್ರಿಯಾಂಕ್ ಖರ್ಗೆಗೆ ಯಾರು ಬೆದರಿಕೆ ಹಾಕಿಲ್ಲ. ಮಲ್ಲಿಕಾರ್ಜುನ ಖರ್ಗೆ ಮಗನಿಗೆ ಯಾರು ಬೆದರಿಕೆ ಹಾಕುತ್ತಾರೆ? ಈ ಆರೋಪ ಸುಳ್ಳಿನಿಂದ ಕೂಡಿದೆ ಎಂದರು.

ಆರ್‌ಎಸ್‌ಎಸ್ ರೀತಿಯಲ್ಲಿಯೇ ಸ್ವಾತಂತ್ರೃ ಹೋರಾಟಗಾರ ವಿ.ಡಿ. ಸಾವರ್ಕರ್ ಕುರಿತು ಸಾಕಷ್ಟು ಟೀಕೆಗಳನ್ನು ಕಾಂಗ್ರೆಸ್ ನಾಯಕರು ಮಾಡುತ್ತಾರೆ. ಅವರು 10 ವರ್ಷ ಜೈಲು ಶಿಕ್ಷೆ ಅನುಭವಿಸಿದವರು. ಗಾಂಧೀಜಿಗೆ ಅವರಿಗೆ ಸರಿಸಮಾನವಾಗಿ ಇದ್ದವರು. ಅವರ ಕುರಿತು ಟೀಕೆ ಸಲ್ಲದು ಎಂದು ಹೇಳಿದರು.

ನಾಯಕತ್ವ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಲಿದೆ. ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಸಿದ್ದರಾಮಯ್ಯ ಪಾರ್ಟಿ ಕಟ್ಟದಿದ್ದರೂ ಅಧಿಕಾರ ಅನುಭವಿಸುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ಅನ್ನು ಸಿದ್ದರಾಮಯ್ಯ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸಿದ್ದರಾಮಯ್ಯ ಸರ್ವನಾಶ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಮಡಿವಾಳರು ಶಾಸಕರಾಗಬೇಕು ಅಂತೀರಾ, ಆದರೆ ಅವರಿಗೆ ಎಲ್ಲಿ ಅವಕಾಶ ಕೊಡ್ತಿದ್ದೀರಾ? ತರೀಕೆರೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದಾರೆ, ಅಂತಹವರಿಗೆ ಅವಕಾಶ ಮಾಡಿಕೊಡಿ. ಸುಮ್ಮನೇ ಬೊಗಳೆ ಬೀಡ್ತಿರಾ ಸಿದ್ದರಾಮಯ್ಯ ನೀವು. ಈಗ ಮೂರು ಪಟ್ಟೆ ವಿಭೂತಿ, ಮಧ್ಯೆ ಕುಂಕುಮ ಹಾಕಿಕೊಂಡು ನಾನು ಹಿಂದು ಅಂತಿರ ಎಂದು ಟೀಕಿಸಿದರು.

ಕಾಂತರಾಜು ಆಯೋಗದ ವರದಿ ಸಿದ್ದರಾಮಯ್ಯ ಓದಿಯೇ ಇಲ್ಲ. ನೀವು ಬರೀ ಬೂಟಾಟಿಕೆ ಮಾಡ್ತಿರಾ ಅಷ್ಟೇ. ನೀವು ಅದರ ಬಗ್ಗೆ ಚರ್ಚೆಯನ್ನೇ ಮಾಡಿಲ್ಲ. ಇದೀಗ ಹೊಸದಾಗಿ ಸಮೀಕ್ಷೆ ನಡೆಸಲು ಪ್ರಾರಂಭೀಸಿದ್ದೀರ. ಸಮೀಕ್ಷೆ ಮಾಡಲು ಹೋದ ಶಿಕ್ಷಕರು ಹೆಣವಾಗಿ ಬಂದಿದ್ದಾರೆ. ಶಿಕ್ಷಕರನ್ನು ನಿಮ್ಮಿಷ್ಟದಂತೆ ನಡೆಸಿಕೊಳ್ತಿದ್ದೀರ. ನಿಮ್ಮ ಸರ್ಕಾರದಲ್ಲಿ ಎಲ್ಲ ವ್ಯವಸ್ಥೆ ಹಾಳಾಗಿದೆ ಎಂದು ಕಿಡಿಕಾರಿದರು.