ಜಿಲ್ಲೆ

ಜಾತಿ ಪದ್ಧತಿ ವಿರುದ್ಧ ಹೋರಾಡಿದ ಸಾಧಕ

ಜಗಳೂರು: ದೇಶ ಮೆಚ್ಚುವ ವಿದ್ವತ್ ಹೊಂದಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಜಾತಿ ಶ್ರೇಣಿ ವಿರುದ್ಧ ಹೋರಾಡಿದ ಮಹಾನ್ ಹೋರಾಟಗಾರ ಎಂದು ಅಂಬೇಡ್ಕರ್ ಯುವಕರ ಬಳಗದ ಮುಖಂಡ ಎಚ್. ಸಂದೀಪ್ ಹೇಳಿದರು.

ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಶನಿವಾರ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಬಳಗದಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ 134 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದಲ್ಲಿ ವಿದ್ಯಾವಂತರಾಗಿ, ಆರ್ಥಿಕವಾಗಿ ಸದೃಢರಾಗಬೇಕು. ಸಂವಿಧಾನದ ಮೂಲಕ ಬೇಕಾದಂತಹ ಹಕ್ಕುಗಳನ್ನು ಕೇಳುವ ಮನಸ್ಥಿತಿಯನ್ನು ಹೊಂದಬೇಕು. ಅದಕ್ಕೆ ಫಲ ದಕ್ಕದಿದ್ದಾಗ ಹೋರಾಟ ಮಾಡುವ ಮನೋಭಾವವನ್ನು ಇಂದಿನ ಪೀಳಿಗೆ ಬೆಳೆಸಿಕೊಳ್ಳಬೇಕು ಎಂದರು.

ಸಮಾನತೆ ಸಾಧಿಸುವವರೆಗೂ ಸಂಘರ್ಷ ಅನಿವಾರ್ಯ. ಮೊದಲು ಶಿಕ್ಷಣ ಪಡೆಯಬೇಕು, ನಂತರ ಸಂಘಟನೆಯೊಂದಿಗೆ ಹೋರಾಟ ಮಾಡಿ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂಬ ಸಂದೇಶಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.

ರಂಗಸ್ವಾಮಿ ಮಾತನಾಡಿ, ಬಾಬಾ ಸಾಹೇಬರು ರಾಜಕೀಯ ಸ್ವಾತಂತ್ರ್ಯ ಏಕೆ ಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಅವರು ಕಾನೂನು ತಜ್ಞರಾಗಿ, ಬರಹಗಾರರಾಗಿ, ಸ್ಕಾಲರ್ ಆಗಿ, ಸಂಪಾದಕರಾಗಿ, ತತ್ವಜ್ಞಾನಿಯಾಗಿ ಹೀಗೆ ಅನೇಕ ವಿಷಯದಲ್ಲಿ ಆಗಾಧ ಪಾಂಡಿತ್ಯವನ್ನು ಹೊಂದಿದವರಾಗಿದ್ದರು ಎಂದರು.

ಕಾರ್ಯಕ್ರಮದ ನಂತರ ಟ್ರ್ಯಾಕ್ಟರ್​ನಲ್ಲಿ ಅಂಬೇಡ್ಕರ್ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಿದರು.

ಮುಖಂಡರಾದ ಕಾಫಿ ಸಂದೀಪ್, ಎಂ.ಎನ್. ಮೋಹನ್, ಹೊನ್ನೂರಸ್ವಾಮಿ, ಎಚ್. ತಿಪ್ಪೇಸ್ವಾಮಿ, ರುಕ್ಕು ತಿಪ್ಪೇಸ್ವಾಮಿ, ಹಾಲೇಶಪ್ಪ, ತೊಗರಿ ಮಂಜುನಾಥ್, ಗುಳ್ಳೆನಾಗ, ಬಸಣ್ಣ, ಹಾಲಪ್ಪ, ಹನುಮಂತಪ್ಪ, ಗ್ಯಾರಂಟಿ ಮೈಲಾರಿ, ಮಹೇಶ್, ಲಾಲ್​ಶಿವಣ್ಣ, ವೈ.ತಿಪ್ಪೇಸ್ವಾಮಿ, ಯಶವಂತ್, ರಂಗಪ್ಪ, ವಸಂತ, ಗಂಗಧರ್, ಹನುಮಕ್ಕ, ಸಾವಿತ್ರಮ್ಮ, ಶಾರದಮ್ಮ, ಪಾಪಮ್ಮ, ಮಹದೇವಮ್ಮ, ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ, ಸುಗಣ ಸೇರಿ ಮತ್ತಿತರರಿದ್ದರು.