ಜಿಲ್ಲೆ

ಎಚ್.ಎಸ್.ವೆಂಕಟೇಶ್‌ಮೂರ್ತಿ ಭಾಷಾ ಜ್ಞಾನ ಅಮೋಘ

ಬೈಂದೂರು: ಸಾಹಿತ್ಯ ರಚನೆಯಿಂದ ಸಮಾಜ ಸುಧಾರಣೆ ಹಾಗೂ ವ್ಯಕ್ತಿತ್ವ ವಿಕಸನಗೊಳ್ಳಬೇಕೆಂದು ಪ್ರತಿ ಸಾಹಿತಿಯೂ ಬಯಸುತ್ತಾನೆ. ಮೌಲ್ಯಾಧಾರಿತ ಬರಹಗಳು ಜಾತಿ, ಧರ್ಮದ ಎಲ್ಲೆ ಮೀರಿ ಸಾರ್ವಕಾಲಿಕವಾಗಿ ಪ್ರಸ್ತುತವಾಗಿರುತ್ತದೆ ಎಂದು ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

ಉಪ್ಪುಂದ ರೈತಸಿರಿ ಸಭಾಭವನದಲ್ಲಿ ಸುರಭಿ ಬೈಂದೂರು, ರಂಗಸ್ಥಳ ಉಪ್ಪುಂದ ಮತ್ತು ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಸಾಹಿತಿ ದಿ.ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ ಅವರ ಭಾವನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಮ್ಮ ಸಮಕಾಲೀನ ಪ್ರಪಂಚಕ್ಕೆ ಎಚ್‌ಎಸ್‌ವಿ ಅವರಂತೆ ಸ್ಪಂದಿಸಿದ ಕವಿ ಇನ್ನೊಬ್ಬರಿಲ್ಲ. ಭಾಷೆ ಬಳಕೆಯಲ್ಲಿ ಅವರು ಏರಿದ ಔನ್ನತ್ಯ ಅಸಾಧಾರಣವಾದುದು ಎಂದು ಶ್ಲಾಘಿಸಿದರು.

ರಂಗಸ್ಥಳ ಉಪ್ಪಂದ ಅಧ್ಯಕ್ಷ ಯು.ಎಚ್.ರಾಜಾರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಇದ್ದರು. ಶಿಕ್ಷಕ ಸಂದೀಪ ದೇವಾಡಿಗ ಸ್ವಾಗತಿಸಿದರು. ಗಣೇಶ್ ಉಪ್ಪುಂದ ವಂದಿಸಿದರು. ಉಪ್ಪುಂದ ರಾರಾ ಮೆಲೋಡಿಯಸ್ ತಂಡದ ಕಲಾವಿದರಾದ ರವಿ ಹೊಸ್ಕೋಟೆ, ರಮ್ಯಾ ರವಿ ಹೊಸ್ಕೋಟೆ, ಚಂದ್ರ ಬಂಕೇಶ್ವರ ಅವರು ಎಚ್‌ಎಸ್‌ವಿ ಅವರ ವಿವಿಧ ಆಯ್ದ ಭಾವಗೀತೆಗಳನ್ನು ಹಾಡಿದರು.