ಬೆಂಗಳೂರು : ಎಚ್‌ಎಸ್‌ವಿ ಎಂದೇ ಖ್ಯಾತರಾಗಿದ್ದ ಹಿರಿಯ ಕವಿ, ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ (80) ಅವರು ಶುಕ್ರವಾರ ನಿಧನರಾಗಿದ್ದಾರೆ.
ಕೆಲದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 7 ಗಂಟೆಗೆ ಮೃತಪಟ್ಟಿದ್ದಾರೆ. ಮೃತರಿಗೆ ನಾಲ್ವರು ಪುತ್ರರಿದ್ದಾರೆ. ಅಪಾರ ಶಿಷ್ಯವರ್ಗ ಹಾಗೂ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ಚಾಮರಾಜಪೇಟೆಯ ಟಿ.ಆರ್. ಮಿಲ್‌ನ ಚಿತಾಗಾರದಲ್ಲಿ ಶನಿವಾರ ಬೆಳಗ್ಗೆ 9 ಗಂಟೆಗೆ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಆಪ್ತ ವಲಯ ತಿಳಿಸಿದೆ.
ಶುಕ್ರವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ರವೀಂದ್ರ ಕಲಾಕ್ಷೇತ್ರ ಆವರಣದ ಸಂಸ ಬಯಲು ರಂಗಮಂದಿರದಲ್ಲಿ ಎಚ್‌ಎಸ್‌ವಿ ಅವರ ಅಂತಿನ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ, ನಿರ್ದೇಶಕರಾದ ಟಿ.ಎಸ್. ನಾಗಾಭರಣ, ಪಿ. ಶೇಷಾದ್ರಿ, ಟಿ.ಎನ್. ಸೀತಾರಾಮ್, ಸಾಹಿತಿ ಜಯಂತ್ ಕಾಯ್ಕಿಣಿ, ನಿವೃತ್ತ ಐಎಎಸ್ ಅಧಿಕಾರಿಗಳಾದ ಮುದ್ದುಮೋಹನ್, ಸಿ. ಸೋಮಶೇಖರ್, ನಟ ಶ್ರೀಧರ್, ಎಲ್.ಎನ್. ಮುಕುಂದರಾಜ್ ಮೊದಲಾದವರು ಅಂತಿಮ ದರ್ಶನ ಪಡೆದರು.
ಗಣ್ಯರ ಸಂತಾಪ: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿ ಹಲವು ಗಣ್ಯರು ಹಾಗೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ಎಚ್‌ಎಸ್‌ವಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಎಚ್‌ಎಸ್‌ವಿ :
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿ ಜನಿಸಿದ ಎಚ್.ಎಸ್. ವೆಂಕಟೇಶಮೂರ್ತಿ ಅವರು, 1973ರಲ್ಲಿ ಬೆಂಗಳೂರಿನ ಸೇಂಟ್ ಜೋಸಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕಗೊಂಡರು. ಮೂರು ದಶಕಗಳ ಕಾಲ ಅಲ್ಲಿಯೇ ಕಾರ್ಯನಿರ್ವಹಿಸಿ 2000ನೆ ಇಸವಿಯಲ್ಲಿ ನಿವೃತ್ತರಾಗಿದ್ದರು.
ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ ಸೇರಿ ಮೊದಲಾದ ಪ್ರಕಾರಗಳಲ್ಲಿ ಅವರು ಸಾಹಿತ್ಯ ಕೃತಿಗಳನ್ನು ರಚಿಸಿರುವ ಎಚ್‌ಎಸ್‌ವಿ ನವೋದಯ ಕಾಲದ ಬರಹಗಾರರು ಮತ್ತು ಭಾವಗೀತೆ ಕವಿಯಾಗಿದ್ದವರು. ಕ್ರಿಯಾಪರ್ವ, ಒಣಮರದ ಗಿಳಿಗಳು, ಎಷ್ಟೊಂದು ಮುಗಿಲು, ಅಮೆರಿಕಾದಲ್ಲಿ ಬಿಲ್ಲುಹಬ್ಬ, ನದಿತೀರದಲ್ಲಿ, ಉತ್ತರಾಯಣ ಮತ್ತು ಕನ್ನಡಿಯ ಸೂರ್ಯ, ವೈದೇಹಿ ಮತ್ತು ಇತರ ಕವನಗಳು ಮೊದಲಾದುವು ಇವರ ಮುಖ್ಯ ಕಾವ್ಯಕೃತಿಗಳು. ಅಗ್ನಿವರ್ಣ, ಚಿತ್ರಪಟ, ಉರಿಯ ಉಯ್ಯಲೆ, ಮಂಥರೆ ಸೇರಿ ವಿವಿಧ ನಾಟಕಗಳು, ತಾಪಿ, ಅಮಾನುಷರು, ಕದಿರನಕೋಟೆ, ಅಗ್ನಿಮುಖಿ, ವೇದವತಿ ನದಿಯಲ್ಲ ಕಾದಂಬರಿಗಳನ್ನು ರಚಿಸಿದ್ದಾರೆ.
ಕನ್ನಡದಲ್ಲಿ ಕಥನ ಕವನಗಳು ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದುಕೊಂಡಿದ್ದರು. ಕಲಬುರಗಿಯಲ್ಲಿ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮಕ್ಕಳಿಗಾಗಿ ಕವಿತೆ, ನಾಟಕ, ಕಥೆಗಳನ್ನೂ ಬರೆದಿದ್ದಾರೆ. ಇವರು ಅನುವಾದಿಸಿದ ಕಾಳಿದಾಸನ ಋತುಸಂಹಾರ ಕಾವ್ಯಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುರಸ್ಕಾರ ಲಭಿಸಿದೆ. ಕನ್ನಡ ರಾಜ್ಯೋತ್ಸವ, ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ನಾನಾ ಪ್ರಶಸ್ತಿಗಳು ಸಂದಿವೆ.