ಜಿಲ್ಲೆ

ಸಚಿವನಾಗಿ ಒಳ್ಳೆಯ ಕೆಲಸ ಮಾಡಿದ್ದೇನೆ, ಅಬಕಾರಿ ಸಚಿವ ನಾಗೇಶ್ ಹೇಳಿಕೆ

ಹರೀಶ್​​ ಕೆ.ಸಿ.

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರದಲ್ಲಿ ಅಬಕಾರಿ ಸಚಿವನಾಗಿ ಒಳ್ಳೆಯ ಕೆಲಸಗಳನ್ನು ಮಾಡಿದ್ದೇನೆ, ಮುಂದೆಯೂ ಮತ್ತಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಉತ್ಸುಕನಾಗಿದ್ದೇನೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದ್ದಾರೆ.

ಇಲಾಖೆ ಪುನರ್ ರಚನೆ, ಕಳ್ಳಭಟ್ಟಿ ಮತ್ತು ಮದ್ಯ ದುರಂತ ತಡೆಗೆ ಕಠಿಣ ಕ್ರಮ, ಅಬಕಾರಿ ರಕ್ಷಕರ ಪದನಾಮ ಬದಲು, ಆಡಳಿತಾತ್ಮಕ ಸುಧಾರಣೆಗಳ ಜಾರಿ, ಎಲ್ಲ ಸಿಬ್ಬಂದಿ ವರ್ಗದವರಿಗೆ ಬಡ್ತಿ ಹಾಗೂ ಪದೋನ್ನತಿ, ಕರೊನಾ ಸಂಕಷ್ಟದಲ್ಲಿಯೂ ಸರ್ಕಾರಕ್ಕೆ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತರಲು ಶ್ರಮಿಸಿದ್ದೇನೆ ಎಂದು ಸಚಿವರು ತಿಳಿಸಿದರು.

ಅಬಕಾರಿ ಸಬ್ ಇನ್‌ಸ್ಪೆಕ್ಟರ್‌ಗಳಿಗೆ ಬೈಕ್ ನೀಡಿಕೆ, ಅಬಕಾರಿ ಅಕಾಡೆಮಿ ಹಾಗೂ ಭವನ ನಿರ್ಮಾಣಕ್ಕೆ ಚಿಂತನೆ, ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಪೊಲೀಸ್ ಇಲಾಖೆ ಮಾದರಿಯಲ್ಲಿ ವೇತನ ನೀಡಲು ಮುಂದಾಗಿದ್ದೇನೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಈಗಾಗಲೇ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಬರುವ ದಿನಗಳಲ್ಲಿ ಇಲಾಖೆಗೆ ಮತ್ತಷ್ಟು ಕಾಯಕಲ್ಪ ನೀಡಲು ಉತ್ಸುಕನಾಗಿದ್ದೇನೆ ಎಂದರು.