ಮಂಡ್ಯ: ಕಲಿಕೆಗೆ ವಯಸ್ಸಿನ ಮಿತಿ ಇಲ್ಲ. ಅಂತೆಯೇ ಓದುವ ಹವ್ಯಾಸದಿಂದ ಜ್ಞಾನಾರ್ಜನೆ ವೃದ್ಧಿಯಾಗುತ್ತದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಮದ ಚೆನ್ನಮ್ಮ ಎಜುಕೇಷನ್ ಟ್ರಸ್ಟ್‌ನಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಒಳ್ಳೆಯ ರೀತಿ ಆಲೋಚನೆ ಮಾಡುವುದರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ. ಇದರಿಂದ ನಾವು ಮಾಡುವ ಒಳ್ಳೆಯ ಕೆಲಸಗಳಿಗೆ ಸಹಕಾರಿಯಾಗಲಿದೆ. ಮಕ್ಕಳಿಗೆ ಹಿರಿಯರು ಉತ್ತಮ ಕಥೆಗಳನ್ನು ಹೇಳುವ ಮೂಲಕ ಕೆಟ್ಟದಾರಿಗೆ ಹೋಗದಂತೆ ತಡೆಗಟ್ಟಬಹುದು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ನಮ್ಮ ದೇಶದಲ್ಲಿ ಶಿಕ್ಷಣಕ್ಕೆ ಕೊರತೆ ಇಲ್ಲ. ಸರ್ಕಾರ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದೆ. ಖಾಸಗಿ ಶಾಲೆಯವರು ಕೂಡ ಹಣಕ್ಕೆ ತಕ್ಕಂತೆ ಶಿಕ್ಷಣ ನೀಡುತ್ತಿದ್ದಾರೆ. ಯುವಕರು ಸಮಾಜದಿಂದ ಒಂದಲ್ಲ ಒಂದು ರೀತಿಯಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆದರೆ ಈ ಪೈಕಿ ಕೆಲ ಯುವಕರು ಸಮಾಜಕ್ಕೆ ಕಂಟಕಪ್ರಾಯರಾಗಿದ್ದಾರೆ. ಶಾಲೆಗಳು ದೇವಾಲಯಗಳಾಗಬೇಕು. ಆಗ ಮಾತ್ರ ಮಕ್ಕಳಲ್ಲಿ ಭಯ, ಭಕ್ತಿ, ಗೌರವ, ನೈತಿಕತೆಯನ್ನು ಕಾಣಬಹುದಾಗಿದೆ. ಶಾಲೆಗಳೇನಾದರೂ ವಾಣಿಜ್ಯ ಕೇಂದ್ರವಾದರೆ ವ್ಯಾಪಾರವಾಗಿ ಬಿಡುತ್ತದೆ. ಇಂದು ಶಿಕ್ಷಣ ಕ್ಷೇತ್ರ ಬಂಡವಾಳ ಶಾಹಿಗಳು ಹಣ ಗಳಿಸುವ ದಾರಿಯಾಗಿದೆ. ಇದು ಆಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಮಾದಪ್ಪ, ಕಲಾವಿದ ಬೋರೇಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಾದೇಗೌಡ, ಉಪನ್ಯಾಸಕ ಅರುಣ್ ಆರಾಧ್ಯ, ಹುಳ್ಳೇನಹಳ್ಳಿ ನಾಗರಾಜು, ಎಂ.ಪಿ.ಚಂದ್ರಶೇಖರ್, ವಿವೇಕ್, ಮಹದೇವು, ವೆಂಕಟೇಶ್, ನರಸಿಂಹ, ವೈಯಂರತ್ನ, ಜಯಶಂಕರ್ ಇತರರಿದ್ದರು. ಇದೇ ವೇಳೆ ವಿದ್ಯಾರ್ಥಿಗಳು ಆಕರ್ಷಕ ಹುಡುಗೆ ತೊಟ್ಟು ಸಿನಿಮಾ ಹಾಡಿಗೆ ನೃತ್ಯ ಮಾಡುವ ಮನರಂಜನೆ ನೀಡಿದರು.