ಮದ್ದೂರು: ಪಟ್ಟಣದ ಎಚ್.ಕೆ.ವೀರಣ್ಣಗೌಡ ಪದವಿಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹಲವಾರು ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದು, ಅಂಥವರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಶಿಕ್ಷಕ ವರ್ಗದಿಂದಾಗಿ ಭಾರತೀಯ ಕಲೆ, ಸಾಹಿತ್ಯ ಜೀವಂತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಕಲೆ, ಸಾಹಿತ್ಯ, ಕ್ರೀಡೆ ಇನ್ನಿತರ ಕ್ಷೇತ್ರಗಳಲ್ಲಿ ಹೆಚ್ಚು ಸಾಧನೆ ಮಾಡಿರುವವರು ಗ್ರಾಮೀಣ ಪ್ರದೇಶದವರೇ ಆಗಿದ್ದು, ಅಂತಹವರನ್ನು ಗುರುತಿಸುತ್ತಿರುವ ಶಿಕ್ಷಕ ವರ್ಗ ದೇಶದ ಅಭ್ಯುದಯಕ್ಕೆ ನಿರಂತರವಾಗಿ ಶ್ರಮಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಪ್ರಸಂಸೆ ವ್ಯಕ್ತಪಡಿಸಿದರು.
ಮಂಡ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಮಂಜುನಾಥ ಪ್ರಸನ್ನ ಮಾತನಾಡಿ, ಎಚ್.ಕೆ.ವೀರಣ್ಣಗೌಡರು ಹಲವಾರು ಶಿಕ್ಷಣ ಸಂಸ್ಥೆಗಳನ್ನು ತೆರೆದು ಗ್ರಾಮೀಣ ಭಾಗದ ಜನರಿಗೆ ಅಕ್ಷರ ಅಭ್ಯಾಸವನ್ನು ಉಣಬಡಿಸಿದ್ದಾರೆ ಎಂದು ಬಣ್ಣಿಸಿದರು.
ಮಂಡ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ರಾಜೇಗೌಡ ಅವರು ಶಾಖಾಧಿಕಾರಿಗಳಾಗಿ ಪದೋನ್ನತಿ ಹೊಂದಿದ ಹಿನ್ನೆಲೆಯಲ್ಲಿ ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆ ವತಿಯಿಂದ ಗಣ್ಯರು ಅಭಿನಂದಿಸಿದರು.
ತಾಲೂಕಿನ ವಿವಿಧ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು ರಸಪ್ರಶ್ನೆ, ಕನ್ನಡ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ, ಆಂಗ್ಲಭಾಷೆ ಪ್ರಬಂಧ, ಏಕಪಾತ್ರ ಅಭಿನಯ, ಭಾವಗೀತೆ, ಜಾನಪದ ಗೀತೆ, ಚಿತ್ರಕಲೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪುರಸಭೆ ಸದಸ್ಯ ಎಸ್.ಮಹೇಶ್, ಎಚ್.ಕೆ.ವೀರಣ್ಣಗೌಡ ಸೇವಾಟ್ರಸ್ಟ್ ಅಧ್ಯಕ್ಷ ಎಸ್.ಶಿವರಾಜು, ಸಂಸ್ಥೆ ಕಾರ್ಯದರ್ಶಿ ಸಿ.ಅಪೂರ್ವಚಂದ್ರ, ಪ್ರಾಂಶುಪಾಲರಾದ ಜಿ.ಎಸ್.ಶಂಕರೇಗೌಡ ಇತರರು ಇದ್ದರು.