ಮಂಡ್ಯ: ಅಪರೂಪವಾದಂತಹ ಗಂಗರ ಬಗ್ಗೆ ಕನ್ನಡಿಗರು ಓದಲು ಒಂದು ಹಸ್ತ ಪ್ರತಿ ಇಲ್ಲ ಎಂಬುವ ಬೇಸರವಿದೆ. ಆದ್ದರಿಂದ ಅವರ ಕುರಿತ ಮಾಹಿತಿಯನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಮೂಲಕ ನಾಂದಿ ಹಾಡಬೇಕಿದೆ ಎಂದು ಕರ್ನಾಟಕ ಜಲಸಾರಿಗೆ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಂ ರಾಯಪುರ ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಹ.ಕ.ರಾಜೇಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗಂಗ ಸಾಮ್ರಾಜ್ಯದ ಬಗ್ಗೆ ಅವರು ಮಾತನಾಡಿದ ಅವರು, ಗಂಗ ಸಾಮ್ರಾಜ್ಯದ ಹಿರಿಮೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ವಿಶ್ವದ ಇತಿಹಾಸವನ್ನು ತೆಗೆದುಕೊಂಡರೂ ಸಹ 650 ರಿಂದ 700 ವರ್ಷದಲ್ಲಿ ಒಬ್ಬ ರಾಜವಂಶಸ್ಥ ಆಳಿದ ಇತಿಹಾಸ ಸಿಗುವುದಿಲ್ಲ. ಪ್ರತಿ 100 ಮತ್ತು 200 ವರ್ಷದಲ್ಲಿ ಹೊಸಬರು ರಾಜರು ಆಳಿದ ಮಾಹಿತಿ ಸಿಗುತ್ತದೆ ಎಂದರು.
ಶಾಸನಕ್ಕೆ ಸಾಂಸ್ಕೃತಿಕ ಇತಿಹಾಸ ಇರುತ್ತದೆ. ಅದನ್ನು ಓದಬೇಕಾದರೆ ಸಂಸ್ಕೃತ, ಕನ್ನಡ, ತಮಿಳು, ಪ್ರಾಕೃತ ಭಾಷೆಗಳು ಬರಬೇಕು. ಇವೆಲ್ಲವನ್ನು ಅಮೂಲಾಗ್ರವಾಗಿ ನೋಡುತ್ತಿದ್ದ ಪ್ರೊ.ಷೇಕ್ ಅಲಿ ಅವರ ಕೃತಿಯು ಇತಿಹಾಸ ಬರೆಯುವವರಿಗೆ ಮಾದರಿ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಲೇಖಕ ಡಿ.ಕೆ.ರಾಜೇಂದ್ರ ಮಾತನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಹ.ಕ.ರಾಜೇಗೌಡ ಅವರ ಪುತ್ರ ಎಚ್.ಆರ್.ದಿನೇಶ್‌ಚಂದ್ರ, ಪುತ್ರಿ ಡಾ.ಚೇತನಾ, ಕರ್ನಾಟಕ ಸಂಘದ ಕಾರ್ಯದರ್ಶಿ ಚಂದಗಾಲು ಲೋಕೇಶ್ ಇತರರಿದ್ದರು.
ಇದೇ ವೇಳೆ ಕರ್ನಾಟಕ ಸಂಘದಿಂದ ಸ್ಥಾಪಿಸಿರುವ ಹ.ಕ.ರಾಜೇಗೌಡ ಅವರ ಹೆಸರಿನ ಪ್ರಶಸ್ತಿಯನ್ನು ಮಂಗಳೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಷೇಕ್ ಅಲಿ ಅವರಿಗೆ ನೀಡಲಾಯಿತು. ಷೇಕ್ ಅಲಿ ಪುತ್ರ ಝಾಕೀರ್ ಹುಸೇನ್ ಅವರು 25 ಸಾವಿರ ರೂ ನಗದಿನ ಜತೆಗೆ ಫಲಕದೊಡನೆ ಸ್ವೀಕರಿಸಿದರು.