ಹೊಳೆನರಸೀಪುರ ಪುರಸಭೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಎಚ್.ಕೆ.ಪ್ರಸನ್ನ ಅವರನ್ನು ಅಭಿನಂದಿಸಲಾಯಿತು. 
ಜಿಲ್ಲೆ

ಹೊಳೆನರಸೀಪುರ ಪುರಸಭೆಗೆ ಎಚ್.ಕೆ.ಪ್ರಸನ್ನ ಅಧ್ಯಕ್ಷ

ಹೊಳೆನರಸೀಪುರ: ಇಲ್ಲಿನ ಪುರಸಭೆ ಅಧ್ಯಕ್ಷರಾಗಿ ಎಚ್.ಕೆ.ಪ್ರಸನ್ನ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ಶ್ರೀಧರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಪುರಸಭೆಯ ಎಚ್.ಡಿ.ದೇವೇಗೌಡ ಸಭಾಂಗಣದಲ್ಲಿ ಚುನಾವಣೆ ನಿಗದಿಯಾಗಿತ್ತು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ 14ನೇ ವಾರ್ಡ್‌ನ ಎಚ್.ಕೆ.ಪ್ರಸನ್ನ ನಾಮಪತ್ರ ಸಲ್ಲಿಸಿದರು. ಇವರನ್ನು ಹೊರತುಪಡಿಸಿ ಬೇರಾರೂ ನಿಗದಿತ ಸಮಯದೊಳಗೆ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.

23 ವಾರ್ಡ್‌ಗಳ ಸದಸ್ಯರು ಹಾಜರಿದ್ದು, ನೂತನ ಅಧ್ಯಕ್ಷರ ಅವಿರೋಧ ಆಯ್ಕೆಗೆ ಸಹಕರಿಸಿದರು. ಪುರಸಭೆಯಲ್ಲಿ ಒಟ್ಟು 23 ಸದಸ್ಯರ ಬಲವಿದ್ದು, ಈ ಪೈಕಿ 22 ಜೆಡಿಎಸ್, ಒಬ್ಬ ಕಾಂಗ್ರೆಸ್ ಸದಸ್ಯರಿದ್ದಾರೆ. ಪುರಸಭೆ ಆಡಳಿತದ ಐದು ವರ್ಷದ ಅವಧಿಗೆ ಐದನೇ ಅಧ್ಯಕ್ಷರಾಗಿ ಪ್ರಸನ್ನ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷ ಎಚ್.ಕೆ.ಪ್ರಸನ್ನ ಮಾತನಾಡಿ, ನಾನು ಜಾತ್ಯತೀತ ಜನತಾದಳ ನಿಷ್ಠಾವಂತ ಕಾರ್ಯಕರ್ತ. ನನ್ನನ್ನು ಗುರುತಿಸಿ ನಮ್ಮ ಪಕ್ಷದ ನಾಯಕರು ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ನಮ್ಮ ಕುಟುಂಬಕ್ಕೆ ಈ ಮೊದಲೇ ಈ ಪದವಿ ಒಲಿಯಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಕೈ ತಪ್ಪಿ ಹೋಗಿತ್ತು. ಈ ಬಾರಿ ನನಗೆ ಅವಕಾಶ ಸಿಕ್ಕಿದೆ. ಇದರಿಂದ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತನಿಗೆ ಬೆಲೆ ದೊರತಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಶಾಸಕರಾದ ಎಚ್.ಡಿ.ರೇವಣ್ಣ, ಸೂರಜ್ ರೇವಣ್ಣ ಹಾಗೂ ಭವಾನಿ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.

ಮಾಜಿ ಅಧ್ಯಕ್ಷ ಕೆ.ಶ್ರೀಧರ್, ಬೈರಶೆಟ್ಟಿ, ಮಧು, ಕಿರಣ್, ನಿಂಗಯ್ಯ, ಜ್ಯೋತಿ, ವೀಣಾ, ಸುಧಾ, ನಳಿನಿ, ಮುಖ್ಯಾಧಿಕಾರಿ ಶಿವಶಂಕರ್ ಸೇರಿದಂತೆ ಹಲವರು ಶುಭ ಕೋರಿದರು. ಪ್ರಸನ್ನ ಅವರನ್ನು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಗೆಳೆಯರು ಅಭಿನಂದಿಸುವುದರ ಜತೆಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.