ಜಿಲ್ಲೆ

ಎಚ್.ಜೆ.ಲಕ್ಕಪ್ಪಗೌಡರ ಸೇವೆ ಅವಿಸ್ಮರಣೀಯ

Mysuru - Desk - Naveen Kumar H P


ಅರಕಲಗೂಡು : ಕನ್ನಡ ಸಾರಸತ್ವ ಲೋಕಕ್ಕೆ ಹಾಗೂ ಸಾಂಸ್ಕೃತಿಕವಾಗಿ ಕರುನಾಡ ಏಳಿಗೆಗೆ ಶ್ರಮಿಸಿರುವ ಹಂಪೆ ಕನ್ನಡ ವಿವಿ ವಿಶ್ರಾಂತ ಕುಲಪತಿ ದಿ.ಡಾ. ಎಚ್.ಜೆ.ಲಕ್ಕಪ್ಪಗೌಡರ ಸೇವೆ ಅವಿಸ್ಮರಣೀಯವಾಗಿದೆ ಎಂದು ಜಾನಪದ ವಿದ್ವಾಂಸ ಡಾ.ಹಂಪನಹಳ್ಳಿ ತಿಮ್ಮೇಗೌಡ ಬಣ್ಣಿಸಿದರು.


ತಾಲೂಕಿನ ಕೊಣನೂರು ಬಿ.ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ಜಾನಪದ ಪರಿಷತ್ತು ಅರಕಲಗೂಡು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಡಾ.ಎಚ್.ಜೆ. ಲಕ್ಕಪ್ಪಗೌಡ ಅವರ ಸಂಸ್ಮರಣೆ ಮತ್ತು ವಿಚಾರ ಸಂಕಿರಣದಲ್ಲಿ ನಡೆದ ಡಾ.ಎಚ್.ಜೆ. ಲಕ್ಕಪ್ಪಗೌಡರ ಜಾನಪದ ಹೆಜ್ಜೆ ಗುರುತುಗಳು ವಿಷಯ ಕುರಿತು ಮಾತನಾಡಿದರು.


ಲಕ್ಕಪ್ಪಗೌಡರ ಹುಟ್ಟೂರು, ಕುಟುಂಬಸ್ಥರು ಮತ್ತು ಸಾಂಸ್ಕೃತಿಕ ವಾತಾವರಣದಿಂದ ಜಾನಪದದ ಕಡೆಗೆ ಹೆಚ್ಚು ಆಸಕ್ತಿ ವಹಿಸಲು ಕಾರಣವಾಯಿತು. ಕುಗ್ರಾಮ ಹಂಪಾಪುರದಿಂದ ಪ್ರಸಿದ್ಧ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಯನ್ನು ಅಲಂಕರಿಸಲು ಲಕ್ಕಪ್ಪಗೌಡರ ಶ್ರದ್ಧೆ ಮತ್ತು ಉನ್ನತ ಆಲೋಚನೆಗಳೆ ಕಾರಣ ಎಂದು ಹೇಳಿದರು.


ಡಾ.ಎಚ್.ಜೆ.ಲಕ್ಕಪ್ಪಗೌಡ ಅವರ ಆಡಳಿತಾತ್ಮಕ ಕೌಶಲ ವಿಷಯ ಕುರಿತು ವಿವರಿಸಿದ ಕರ್ನಾಟಕ ಬಯಲಾಟ ಆಕಾಡೆಮಿಯ ಸದಸ್ಯ ಡಾ. ಚಂದ್ರು ಕಾಳೇನಹಳ್ಳಿ, ಕೊಣನೂರು ಲಕ್ಕಪ್ಪಗೌಡರ ಕರ್ಮಭೂಮಿಯಾಗಿದ್ದು, ಇಲ್ಲಿ ಅವರ ಸಂಸ್ಮರಣೆಯನ್ನು ಆಯೋಜಿಸಿರುವುದು ಔಚಿತ್ಯವಾಗಿದೆ. ಸಾಹಿತ್ಯ, ಸಂಸ್ಕೃತಿ, ಜಾನಪದ ಮತ್ತು ಆಡಳಿತ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ ಅಪರೂಪದ ವ್ಯಕ್ತಿತ್ವ ಎಂದರು.


ಕರ್ನಾಟಕ ಜಾನಪದ ಅಕಾಡೆಮಿಯ ಸಂಚಾಲಕ ದೇವಾನಂದ ವರಪ್ರಸಾದ ಮಾತನಾಡಿ, ವಿಶ್ವ ಜಾನಪದ ದಿನಾಚರಣೆಯ ನಿಮಿತ್ತ ಕರ್ನಾಟಕದ ಜಾನಪದ ತೇರನ್ನು ಎಳೆದ ಮಹನೀಯರನ್ನು ಸ್ಮರಿಸುವ ನಿಟ್ಟಿನಲ್ಲಿ ಸ್ಥಳೀಯ ದಿ.ಡಾ.ಎಚ್.ಜೆ.ಲಕ್ಕಪ್ಪಗೌಡರ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.


ಜಾನಪದ ಕಲಾವಿದ ವೀರಭದ್ರಯ್ಯ ಮತ್ತು ತಂಡದ ಕಲಾವಿದರು ತತ್ವಪದಗಳನ್ನು ಹಾಡಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಎಸ್.ಸಿ.ಚೌಡೇಗೌಡ, ಗ್ರಾ.ಪಂ.ಅಧ್ಯಕ್ಷೆ ಮಿಸ್ಬಾ ರಿಜ್ಞಾನ್, ಪ್ರಾಂಶುಪಾಲ ಎಂ.ಮಹೇಶ್ ಮಾತನಾಡಿದರು. ಅಬಕಾರಿ ಇಲಾಖೆಯ ಪ್ರಸನ್ನ, ಮೈಸೂರು ಉಮೇಶ್, ಕನ್ನಡ ವಿಭಾಗದ ಮುಖ್ಯಸ್ಥ ರಾಜೀವ. ಲಕ್ಕಪ್ಪಗೌಡರ ಅಭಿಮಾನಿ ಬಳಗದ ಅಧ್ಯಕ್ಷ ಕೋನಾಪುರ ರಾಜೇಶ್, ಸಾರಿಗೆ ಸಂಸ್ಥೆಯ ಕೆ.ಜೆ.ಮೊಗಣ್ಣ, ಚಂದ್ರಶೇಖರ್, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿದ್ದರು.