ಜಿಲ್ಲೆ

ಸಾಲಮನ್ನಾ ಹಣ ನೀಡದ ಬಿಜೆಪಿ : ಮಾಜಿ ಸಿಎಂ ಕುಮಾರಸ್ವಾಮಿ ಆರೋಪ

Tumakuru

ಶಿರಾ: ಸಮ್ಮಿಶ್ರ ಸರ್ಕಾರದ 14 ತಿಂಗಳ ಅವಧಿಯಲ್ಲಿ 25 ಸಾವಿರ ಕೋಟಿ ರೂ., ಸಾಲಮನ್ನಾ ಮಾಡಿದ್ದೆ. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಣ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಕಳ್ಳಂಬೆಳ್ಳ ಹೋಬಳಿ ಹಾಲೇನಹಳ್ಳಿ, ಬಾಲೇನಹಳ್ಳಿ, ತರೂರು, ಭೂಪಸಂದ್ರ, ದೊಡ್ಡ ಆಲದಮರ ಸೇರಿ ವಿವಿಧೆಡೆ ಗುರುವಾರ ಜೆಡಿಎಸ್ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ನಡೆಸಿದ ಅವರು, ಈ ತಾಲೂಕು ಒಂದರಲ್ಲೇ 17 ಸಾವಿರ ರೈತರು ಸಾಲಮನ್ನಾ ಪ್ರಯೋಜನ ಪಡೆದಿದ್ದಾರೆ. 2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮದಲೂರು ಕೆರೆಗೆ ನೀರು ಹರಿಸಲು 600 ಕೋಟಿ ರೂ., ಬಿಡುಗಡೆ ಮಾಡಿದ್ದೆ. ಈಗ ಬಿಜೆಪಿಯವರು ಮದಲೂರಿಗೆ ಹೇಮೆ ವಿಚಾರ ಪ್ರಸ್ತಾಪಿಸುತ್ತಿದ್ದಾರೆ ಕಿಚಾಯಿಸಿದರು.

ಬಿಜೆಪಿ ಪರ ಕತ್ತಲಾದ ಮೇಲೆ ಮನೆಗಳಿಗೆ ತೆರಳಿ 200-500 ರೂ., ಹಂಚಲು ಹೊರ ಜಿಲ್ಲೆಗಳಿಂದ ಹುಡುಗರು ಬಂದಿದ್ದಾರೆ. ಅಂತಹವರಿಗೆ ಕೆಲ ರೈತ ಮಹಿಳೆಯರು ತಕ್ಕಶಾಸ್ತಿ ಮಾಡಿ, ರೈತರಿಗೆ ಮತ ಹಾಕುವುದಾಗಿ ಹೇಳಿದ್ದಾರೆ. ಅವರಿಗೆ ಚಿರಋಣಿಯಾಗಿರುವುದಾಗಿ ಕುಮಾರಸ್ವಾಮಿ ಹೇಳಿದರು.

ಕೆ.ಆರ್.ಪೇಟೆ ಮಾದರಿಯಲ್ಲಿ ಹಣ ಹಂಚಿ ಚುನಾವಣೆ ಗೆಲ್ಲಲು ಬಂದಿರುವ ಬಿಜೆಪಿಗೆ ಶಿರಾದ ಸ್ವಾಭಿಮಾನಿ ಮತದಾರರು ತಕ್ಕ ಪಾಠ ಕಲಿಸಬೇಕಿದೆ. ಪಕ್ಷಕ್ಕೆ ನಿಷ್ಠರಾಗಿದ್ದ ಸತ್ಯಣ್ಣ ಅವರ ನೈತಿಕತೆ ಗೆಲ್ಲಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದರು.

ಪಕ್ಷದಲ್ಲಿ ಅಧಿಕಾರ ಅನುಭವಿಸಿದ ಹಲವರು ನಮ್ಮನ್ನು ಬಿಟ್ಟು ಹೋಗಿದ್ದಾರೆ. ಯಾರೇ ಹೋದರು ಪಕ್ಷದಲ್ಲಿ ಬಲಿಷ್ಠ ಕಾರ್ಯಕರ್ತರ ಪಡೆ ಇದೆ. ಅಮ್ಮಾಜಮ್ಮ ಅವರನ್ನು ಗೆಲ್ಲಿಸುವ ಮೂಲಕ ಶಿರಾ ಜೆಡಿಎಸ್ ಭದ್ರಕೋಟೆ ಎನ್ನುವುದನ್ನು ನಿರೂಪಿಸುತ್ತೇವೆ ಎಂದು ಸವಾಲು ಹಾಕಿದರು.

ಈ ವೇಳೆ ಜೆಡಿಎಸ್ ಅಭ್ಯರ್ಥಿ, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮುಖಂಡರು ಇದ್ದರು.

ಕಟೀಲ್ ವಿದೂಷಕ ! : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿದೂಷಕನಿದ್ದಂತೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಣ್ಣೀರಾಕುವ ಸಿಎಂ ಕುಮಾರಸ್ವಾಮಿ ಎಂದು ಲೇವಡಿ ಮಾಡಿದ್ದಕ್ಕೆ ತಿರುಗೇಟು ನೀಡಿರುವ ಎಚ್ಡಿಕೆ, ರಾಜ್ಯದಲ್ಲಿ ನೆರೆಯಿಂದಾಗಿ ಜನರು ಬೀದಿಯಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಅದೆಷ್ಟು ಜನರ ಕಣ್ಣೀರನ್ನು ಇವರು ಒರೆಸಿದ್ದಾರೆಂದು ಕಟೀಲ್ ಅವರು ಹೇಳಬೇಕು. ಬಿಜೆಪಿ ಅಧ್ಯಕ್ಷರಾಗಿ ಗೌರವ ಸಿಗಬೇಕಾದ್ರೆ ಮೊದಲು ಗಾಂಭೀರ್ಯತೆ ಕಲಿತುಕೊಳ್ಳಲಿ ಎಂದು ಕಿಡಿಕಾರಿದರು.

ಶಿರಾ ಧರ್ಮಯುದ್ದದಲ್ಲಿ ಇರುವವರು ಬಿಜೆಪಿಯ ಪಂಚಪಾಂಡವರಲ್ಲ ದೇಶ ಲೂಟಿಮಾಡೋರು. ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣ ಧರ್ಮ ಉಳಿಸಲಿಕ್ಕೆ ಹೋರಾಟ ಮಾಡಿದ. ಬಿಜೆಪಿಯವರು ಧರ್ಮ ಅಳಿಸಲಿಕ್ಕೆ, ಮುಗಿಸಲಿಕ್ಕೆ ಹೊರಟಿದ್ದಾರೆ. ಧರ್ಮದ ಬಗ್ಗೆ ಚರ್ಚೆ ಮಾಡುವಂತಹ ಯೋಗ್ಯತೆ ಕಟೀಲ್ ಹಾಗೂ ಬಿಜೆಪಿ ಇಲ್ಲ ಎಂದು ತಿರುಗೇಟು ಕೊಟ್ಟರು.

ದಣಿವರಿಯದ ದಳಪತಿ ಎಚ್ಡಿಡಿ : ಬಿಸಿಲು, ಗಾಳಿ ಲೆಕ್ಕಿಸದೆ ಶಿರಾ ವಿಧಾನಸಭಾ ಕ್ಷೇತ್ರದ ಹಳ್ಳಿ, ಹಳ್ಳಿ ಸುತ್ತುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದಣಿವರಿಯದ ದಳಪತಿ ಎನಿಸಿಕೊಂಡಿದ್ದಾರೆ. ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಟೊಂಕಕಟ್ಟಿ ನಿಂತಿರುವ ದೇವೇಗೌಡರನ್ನು ತಾಲೂಕಿನ ಕಲ್ಲಹಳ್ಳಿಯಲ್ಲಿ ಪೂರ್ಣಕುಂಭ ಸ್ವಾಗತ ಕೋರಿ ಜನತೆ ಬರಮಾಡಿಕೊಂಡರು. ಹಂದಿಕುಂಟೆ ಗ್ರಾಪಂ ವ್ಯಾಪ್ತಿಯ ಬಡಮಾರನಹಳ್ಳಿ ಸೇರಿ ವಿವಿಧೆಡೆ ಗುರುವಾರ ದೊಡ್ಡಗೌಡರು ಪ್ರಚಾರ ನಡೆಸಿದರು.