ಜಿಲ್ಲೆ

ಎಚ್.ಡಿ. ಕುಮಾರಸ್ವಾಮಿ ಕ್ಷಮೆಗೆ ಆಗ್ರಹ

ಮಂಜುನಾಥ ತಿಮ್ಮಯ್ಯ

ಮೈಸೂರು: ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಹೋಬಳಿ, ತಾಲೂಕು ಮಟ್ಟದಲ್ಲೂ ಹೋರಾಟ ಮಾಡಲಾಗುವುದು ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ತಿಳಿಸಿದರು.


ಎಚ್.ಡಿ. ಕುಮಾರಸ್ವಾಮಿಯ ಈ ಹೇಳಿಕೆ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಬಿಜೆಪಿ-ಜೆಡಿಎಸ್ ಪಕ್ಷ ಮಹಿಳಾ ವಿರೋಧಿಗಳು. ಮಹಿಳೆಯರ ಬಗ್ಗೆ ಹಗುರವಾಗಿ ಮಾತಾಡುವುದನ್ನು ಕಾಯಕ ಮಾಡಿಕೊಂಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.


ಗ್ಯಾರಂಟಿ ಯೋಜನೆಗಳು ಮಹಿಳೆಯರನ್ನು ಸ್ವಾವಲಂಬಿಯಾಗಿಸಿವೆ. ನಿತ್ಯ 3-4 ಲಕ್ಷ ಹೆಣ್ಣು ಮಕ್ಕಳು ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಗಾರ್ಮೆಂಟ್ಸ್ ಮಹಿಳೆಯರು, ಕೂಲಿ ಕಾರ್ಮಿಕರು ಈ ಸೌಲಭ್ಯದ ಲಾಭ ಪಡೆದುಕೊಳ್ಳುತ್ತಿದ್ದಾರೆ. ಬಡ ಹೆಣ್ಣು ಮಕ್ಕಳ ಕುರಿತು ಹಗುರ ಮಾತನ್ನು ದೇಶದ ಎಲ್ಲ ಮಹಿಳೆಯರೂ ಖಂಡಿಸಬೇಕು ಎಂದರು.


ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನುಸ್ಮತಿಯ ಗಾಳಿಯ ಸೋಕಿದೆ. ತಮ್ಮ ಪಕ್ಷದಲ್ಲಿನ ಜಾತ್ಯತೀತ ಪದವನ್ನು ತೆಗೆದು ಹಾಕಬೇಕು. ಹಿಂದಿನ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಕುರಿತು ಹಗುರವಾಗಿ ಮಾತನಾಡಿದ್ದರು.

ಅದನ್ನು ಈಗಲೂ ಮುಂದುವರಿಸಿದ್ದಾರೆ. ತಮ್ಮ ಹೇಳಿಕೆಗೆ ಎಲ್ಲೆಡೆ ವಿರೋಧ ವ್ಯಕ್ತವಾದ ಬಳಿಕ ಕುಮಾರಸ್ವಾಮಿ ಇದೀಗ ವಿಷಾದ ವ್ಯಕ್ತಪಡಿಸಿದ್ದಾರೆ. ಅದಕ್ಕೆ ನಮ್ಮ ಒಪ್ಪಿಗೆ ಇಲ್ಲ. ಕುಮಾರಸ್ವಾಮಿ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಸಹ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.


ಮಾಜಿ ಮೇಯರ್ ಮೋದಾಮಣಿ ಮಾತನಾಡಿ, ಮಹಿಳೆಯರು ಎಲ್ಲಿ ದಾರಿ ತಪ್ಪಿದ್ದಾರೆ? ಈ ಹೇಳಿಕೆ ನೀಡಲು ನಿಮಗೆ ಏನು ಅರ್ಹತೆ ಇದೆ? ಹೀಗೆ ಮಾತಾಡಲು ನಿಮಗೆ ಅನುಮತಿ ಕೊಟ್ಟವರು ಯಾರು? ಎಂದು ಕುಟುಕಿದರು.


ಪಕ್ಷದ ನಗರಾಧ್ಯಕ್ಷ ಆರ್. ಮೂರ್ತಿ, ಮುಖಂಡರಾದ ಪುಷ್ಪವಲ್ಲಿ, ಸುಶೀಲಾ ಕೇಶವಮೂರ್ತಿ, ಲತಾ ಮೋಹನ್, ರೇಖಾ ಶ್ರೀನಿವಾಸ್, ಶುಭದಾಯಿನಿ ಇನ್ನಿತರರಿದ್ದರು.

ಜಿಟಿ ದೇವೇಗೌಡರ ವಿರುದ್ಧ ಕಿಡಿ


ಶಾಸಕ ಜಿ.ಟಿ.ದೇವೇಗೌಡ ಅವರು ಗ್ಯಾರಂಟಿ ಯೋಜನೆಗಳಿಂದ ಭಯೋತ್ಪಾದನೆ ಹೇಳಿಕೆಯೂ ದುರಂತ ಮತ್ತು ಬಡವರಿಗೆ ಮಾಡಿದ ಅವಮಾನ. ಕಾಂಗ್ರೆಸ್ ಗ್ಯಾರಂಟಿಗಳನ್ನು ಭಯೋತ್ಪಾದನೆ ಎನ್ನುವುದಾದರೆ, ಮೋದಿ ಗ್ಯಾರಂಟಿಯನ್ನು ರಾಷ್ಟ್ರೀಯ ಭಯೋತ್ಪಾದನೆ ಎನ್ನಬೇಕಾಗುತ್ತದೆ.

ಸೋಲಿನ ಹತಾಸೆಯಿಂದ ಜೆಡಿಎಸ್ ನಾಯಕರು ಮಾತನಾಡುತ್ತಿದ್ದಾರೆ. ಗ್ಯಾರಂಟಿ ಅಲೆಯಲ್ಲಿ ಕೊಚ್ಚಿ ಹೋಗಲಿದ್ದಾರೆ ಎಂದು ಡಾ.ಪುಷ್ಪಾ ಅಮರನಾಥ್ ಹರಿಹಾಯ್ದರು


ಮೈಸೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳಿ ಹೋಗಿದ್ದಾರೆ. ಅವರಿಗೆ ಬಡ ಕುಟುಂಬಗಳ ಮತ ಕೇಳುವ ಹಕ್ಕಿಲ್ಲ. ಇನ್ನೆಷ್ಟು ವರ್ಷಗಳು ದೇಶ, ರಾಮನ ಹೆಸರಿನಲ್ಲಿ ಮತ ಕೇಳುತ್ತೀರಿ ಎಂದು ಪ್ರಶ್ನಿಸಿದರು.