ಜಿಲ್ಲೆ

ಸಮಾಜ ವಿಂಗಡಿಸಿ ರಾಜಕೀಯ ಮಾಡುವವರಿಗೆ ದೇವರು ಒಳ್ಳೆ ಬುದ್ಧಿ ಕರುಣಿಸಲಿ

Kolar

ಕೋಲಾರ: ಸಮಾಜ ವಿಂಗಡಿಸಿ ರಾಜಕೀಯ ಮಾಡುವವರಿಗೆ ದೇವರು ಒಳ್ಳೆ ಬುದ್ಧಿ ಕರುಣಿಸಲಿ, ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ವಿಕೃತ ಮನಸ್ಸಿನವರನ್ನು ಬದಲಿಸಿ ದೇಶವನ್ನು ಕಾಪಾಡಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಾರ್ಥಿಸಿದರು.

ತಾಲೂಕಿನ ಕಲ್ಲಂಡೂರಿನಲ್ಲಿ ನಿರ್ಮಿಸಲಾಗಿರುವ ಚಂದ್ರಮೌಳೇಶ್ವರ ದೇವಾಲಯ ಜೀರ್ಣೋದ್ಧಾರದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ರೈತರು, ಯುವಕರು ಸಂಕಷ್ಟದಲ್ಲಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕಾದವರು ವಿನಾಶದ ಹಂತಕ್ಕೆ ದೇಶ ಕೊಂಡೊಯ್ಯುತ್ತಿದ್ದಾರೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೆಸಿ ವ್ಯಾಲಿ ಯೋಜನೆಯ 2ನೇ ಹಂತದ ಕಾಮಗಾರಿಗಳಿಗೆ ಮೈತ್ರಿ ಸರ್ಕಾರದಲ್ಲಿ ಹಣ ಮಂಜೂರು ಮಾಡಲಾಗಿತ್ತು, ನಂತರ ಅಧಿಕಾರಕ್ಕೆ ಬಂದವರು ವಿನಾಕಾರಣ ತಡೆಹಿಡಿದರು. ಆ ಕೆಲಸ ಪೂರ್ಣಗೊಳಿಸಲು ಮತ್ತೆ ನಾವೇ ಅಧಿಕಾರಕ್ಕೆ ಬರಬೇಕೇನೋ ಎಂದು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದರು.

ಮಾಜಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಪಾಳು ಬಿದ್ದಿದ್ದ ದೇವಾಲಯವನ್ನು ಮರು ನಿರ್ಮಾಣ ಮಾಡಿಸಿರುವುದು ಸಂತಸದ ವಿಚಾರ. ಪುರಾತನ ದೇವಾಲಯ ಜೀರ್ಣೋದ್ಧಾರಗೊಳಿಸಿರುವುದರಿಂದ ಮುಂದಿನ ಪೀಳಿಗೆಗೆ ಇತಿಹಾಸ ಪರಿಚಯಿಸಲು ಅನುಕೂಲವಾಗಲಿದೆ ಎಂದರು.

ರೈತರು ನೀಲಗಿರಿ ತೆಗೆದು ಕೃಷಿಯತ್ತ ಮುಖ ಮಾಡಿರುವುದು ಸಂತಸದ ವಿಚಾರ. ಕೆಸಿ ವ್ಯಾಲಿ ಯೋಜನೆಯ ಎರಡನೇ ಹಂತದ ಕಾಮಗಾರಿಗೆ ಸಮ್ಮಿಶ್ರ ಸರ್ಕಾರ 450 ಕೋಟಿ ರೂ.ಮಂಜೂರು ಮಾಡಿದ್ದು, ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ. ಮುಂದಿನ ವರ್ಷದೊಳಗೆ ಎಲ್ಲ ಕೆರೆಗಳಿಗೂ ನೀರು ತುಂಬುವ ನಿರೀಕ್ಷೆಯಿದೆ ಎಂದು ಕುಮಾರಸ್ವಾಮಿ ಟೀಕೆಗೆ ವ್ಯತಿರಿಕ್ತ ಪ್ರತಿಕ್ರಿಯೆ ನೀಡಿದರು.

ಶಾಸಕ ಕೆ.ಶ್ರಿನಿವಾಸಗೌಡ ಮಾತನಾಡಿ, ಗ್ರಾಮಗಳಲ್ಲಿ ಶೋಕಿಗೆ, ಪೈಪೋಟಿಗೆ ದೇವಾಲಯಗಳನ್ನು ನಿರ್ಮಾಣ ಮಾಡಬಾರದು. ಭಕ್ತಿಯಿಂದ ನಿರ್ವಹಣೆ ಮಾಡಬೇಕು ಎಂದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಆರ್.ಚೌಡರೆಡ್ಡಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಒಕ್ಕಲಿಗರ ಸಂಘದ ನಿರ್ದೇಶಕ ಯಲವಳ್ಳಿ ರಮೇಶ್, ಮಾಜಿ ನಿರ್ದೇಶಕ ನಂಜುಂಡೇಗೌಡ, ವಕೀಲ ಲೋಕೇಶ್, ಜಿಪಂ ಸದಸ್ಯ ನಂಜುಡಪ್ಪ, ಮಾಜಿ ಸದಸ್ಯರಾದ ಮಂಗಮ್ಮ ಮುನಿಸ್ವಾಮಿ, ಚೌಡೇಶ್ವರಿ, ಮುಖಂಡರಾದ ಸಮೃದ್ಧಿ ಮಂಜುನಾಥ್, ಮಲ್ಲೇಶ್‌ಬಾಬು ಇದ್ದರು.